ನವದೆಹಲಿ / ಬೆಂಗಳೂರು: ವಿದೇಶಿ ವಂತಿಗೆ (ನಿಯಂತ್ರಣ) ಕಾಯ್ದೆನಿಯಮಗಳನ್ನು ಉಲ್ಲಂಘಿಸಿ ಅಮೆರಿಕ ಮೂಲದ ‘ದಿ ತಿಮೋತಿ ಇನಿಶಿಯೇಟಿವ್’ ಎಂಬ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯು ಸುಮಾರು 92.55 ಕೋಟಿ ರೂಪಾಯಿ ($9,995,240) ಅಕ್ರಮ ವಿದೇಶಿ ಹಣವನ್ನು ಭಾರತದಲ್ಲಿ ನಗದಾಗಿ ಹಿಂಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರೀಯ ತನಿಖಾ ದಳ (CBI) ಎಫ್‌ಐಆರ್ ದಾಖಲಿಸಿಕೊಂಡಿದೆ.
ಅಮೆರಿಕದ ‘ಟ್ರೂಸ್ಟ್ ಬ್ಯಾಂಕ್’ ನೀಡಿದ್ದ ಸುಮಾರು 1,000ಕ್ಕೂ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಕರ್ನಾಟಕ, ಛತ್ತೀಸ್‌ಗಢ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಎಟಿಎಮ್‌ಗಳಿಂದ ಹಣ ಡ್ರಾ ಮಾಡಲಾಗಿದೆ. ಈ ಹಣವನ್ನು ಬಡ ಜನರಿಗೆ ಧಾರ್ಮಿಕ ಪ್ರಚಾರ, ಬ್ರೈನ್ ವಾಶಿಂಗ್ ಮತ್ತು ಎಡಪಂಥೀಯ ಉಗ್ರವಾದ ಚಟುವಟಿಕೆಗಳಿಗೆ ಪ್ರಚೋದನೆ ನೀಡಲು ಬಳಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಏಪ್ರಿಲ್ 18ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಕಾ ಮಾರ್ಕ್ ಎಂಬಾತನನ್ನು ವಶಕ್ಕೆ ಪಡೆದರು. ಆತನ ಬಳಿ ‘ಸಂತೋಷ್ ಕುಮಾರ್’ ಎಂಬ ಹೆಸರಿನಲ್ಲಿದ್ದ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಅನುಮಾನ ಬಾರದಂತೆ ಭಾರತದಲ್ಲಿ ಸಾಮಾನ್ಯ ಹೆಸರಾದ ಸಂತೋಷ್ ಕುಮಾರ್ ಹೆಸರಿನಲ್ಲಿ ಕಾರ್ಡ್ ಮುದ್ರಿಸಲಾಗಿತ್ತು.
ಆರೋಪಿಗಳ ಪಟ್ಟಿ:
ಸಿಬಿಐ ತನ್ನ ಎಫ್‌ಐಆರ್‌ನಲ್ಲಿ TTI ಸಂಸ್ಥೆಯ ಜೊತೆಗೆ ಜೊನಾಥನ್ ಎಸ್. ರಾಜನ್ (ಭಾರತ ಕಾರ್ಯಾಚರಣೆ ಮುಖ್ಯಸ್ಥ), ಅಜಿತ್ ವರ್ಗೀಸ್ ಮಥಾಯ್ (ಹಣಕಾಸು ಮುಖ್ಯಸ್ಥ), ಮೈಕಾ ಮಾರ್ಕ್ ಹಾಗೂ ಫೀಲ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಬಾಬ್ಲು ಕುರ್ಮಿ, ಸುಪ್ರೀಂ ಜಾಯ್, ವರ್ಗೀಸ್ ಚಾಕೊ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಿದೆ.
ಸಾಕ್ಷ್ಯ ನಾಶದ ಯತ್ನ:
ಇಡಿ ಮತ್ತು ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ TTI ಸಂಸ್ಥೆಯ ಅಮೆರಿಕದಲ್ಲಿರುವ ಸರ್ವರ್‌ಗಳ ಮೂಲಕ ಭಾರತೀಯ ಡೇಟಾವನ್ನು ರಿಮೋಟ್ ಆಕ್ಸೆಸ್ ಬಳಸಿ ಡಿಲೀಟ್ ಮಾಡಲಾಗಿದೆ ಹಾಗೂ ಕ್ಲೌಡ್ ಡೇಟಾವನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿದೆ.





Leave a comment