ನವದೆಹಲಿ: ತಂಬಾಕು ಸೇವನೆ ಮಾಡದಿದ್ದರೂ, ಕೇವಲ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ದೆಹಲಿಯಂತಹ ಮಹಾನಗರಗಳಲ್ಲಿ ಯುವಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಊರ್ವಶಿ ಪ್ರಸಾದ್ ಎಂಬುವವರಿಗೆ 35 ನೇ ವಯಸ್ಸಿನಲ್ಲಿಯೇ ಈ ಕಾಯಿಲೆ ತಗುಲಿರುವುದು ಇಡೀ ದೇಶದ ಗಮನ ಸೆಳೆದಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ, ಬದಲಿಗೆ ದೆಹಲಿಯ ಕಲುಷಿತ ವಾತಾವರಣ ಸೃಷ್ಟಿಸುತ್ತಿರುವ ಕಠಿಣ ವಾಸ್ತವವಾಗಿದೆ.
ಟಾಟಾ ಮೆಮೋರಿಯಲ್ ಸೆಂಟರ್ ವರದಿಯ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಪೀಡಿತರಲ್ಲಿ ಶೇ. 55 ರಷ್ಟು ಮಂದಿ ಎಂದಿಗೂ ಧೂಮಪಾನ ಮಾಡದವರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಪ್ರತಿವರ್ಷ 1,11,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿರುವುದಾಗಿ ಅಂದಾಜಿಸಿದೆ. ಮಾಲಿನ್ಯದಿಂದ ಹರಡುವ ‘EGFR-ಮ್ಯೂಟೆಂಟ್ ಅಡೆನೊಕಾರ್ಸಿನೋಮ’ (EGFR-mutant adenocarcinoma) ಎಂಬ ಕ್ಯಾನ್ಸರ್ ಪ್ರಕಾರವು ಯುವತಿಯರು ಹಾಗೂ ಧೂಮಪಾನ ಮಾಡದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ವಾಯು ಮಾಲಿನ್ಯವನ್ನು 2013ರಲ್ಲೇ ತಂಬಾಕಿನಷ್ಟೇ ಅಪಾಯಕಾರಿ ಎಂದು ಗ್ರೂಪ್-1 ರಂಗಿಗೆ ಸೇರಿಸಿದೆ.
ಮಾಲಿನ್ಯದ ಹೊಡೆತ:
ದೆಹಲಿಯಲ್ಲಿ ನವೆಂಬರ್ ತಿಂಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರ ಕುಸಿಯುತ್ತಿದ್ದು, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಪಟಕಾ ಸಿಡಿಸುವುದರಿಂದ PM2.5 ಕಣಗಳ ಪ್ರಮಾಣ ವಿಪರೀತ ಹೆಚ್ಚಾಗಿ ಒಂದು ದಿನ ಉಸಿರಾಡುವುದು 10 ಸಿಗರೇಟ್ ಸೇದಿದಂತೆ ಅಪಾಯಕಾರಿಯಾಗುತ್ತದೆ.
ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ವೈಫಲ್ಯ:
ಕಳೆದ 7 ವರ್ಷಗಳಲ್ಲಿ 16,800 ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಿದ್ದರೂ, ರಸ್ತೆ ಧೂಳಿನಂತಹ (PM10) ದೃಶ್ಯಮಾನ ಅಂಶಗಳ ಮೇಲೆಯೇ ಗಮನಹರಿಸಲಾಗಿದೆ ವಿನಃ ಮಾರಣಾಂತಿಕ PM2.5 ಕಣಗಳ ಕಡೆಗೆ ನಿರ್ಲಕ್ಷ್ಯ ವಹಿಸಲಾಗಿದೆ.
ಆರ್ಥಿಕ ಮತ್ತು ಆರೋಗ್ಯ ನಷ್ಟ:
ಲಾನ್ಸೆಟ್ ಕೌಂಟ್ಡೌನ್ ವರದಿಯ ಪ್ರಕಾರ, 2022ರಲ್ಲಿ ಭಾರತದಲ್ಲಿ ಕಲುಷಿತ PM2.5 ನಿಂದಾಗಿ ಸುಮಾರು 1.72 ಮಿಲಿಯನ್ ಸಾವುಗಳು ಸಂಭವಿಸಿವೆ ಮತ್ತು ಇದು ದೇಶದ ಜಿಡಿಪಿಯ ಶೇ. 9.5 ರಷ್ಟು ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.
ಪ್ರತಿ ವರ್ಷ ಚಳಿಗಾಲ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರ್ಕಾರಗಳು ಮತ್ತು ಕೇವಲ ಪಟಾಕಿಗಳ ಮೇಲೆ ಮಾತ್ರ ಗೂಬೆ ಕೂರಿಸುವ ಸಾರ್ವಜನಿಕರು ಒಟ್ಟಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕೇವಲ ಧೂಳು ಗುಡಿಸುವುದಲ್ಲದೆ, ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆರೋಗ್ಯ ಗುರಿಗಳನ್ನು ರೂಪಿಸುವ ಅನಿವಾರ್ಯತೆ ಇದೆ.





Leave a comment