Home ಕ್ರೈಂ ನ್ಯೂಸ್ ತಮಿಳುನಾಡು ಸರ್ಕಾರ ಡಿಎಂಕೆ ದಯೆಯಿಂದ ನಡೆಯುತ್ತಿದೆ, ವಿಜಯ್ ಅಲೆ ಹೆಚ್ಚು ದಿನ ಉಳಿಯಲ್ಲ: ಎಂ.ಕೆ. ಸ್ಟಾಲಿನ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ತಮಿಳುನಾಡು ಸರ್ಕಾರ ಡಿಎಂಕೆ ದಯೆಯಿಂದ ನಡೆಯುತ್ತಿದೆ, ವಿಜಯ್ ಅಲೆ ಹೆಚ್ಚು ದಿನ ಉಳಿಯಲ್ಲ: ಎಂ.ಕೆ. ಸ್ಟಾಲಿನ್!

Share
ಎಂ.ಕೆ. ಸ್ಟಾಲಿನ್
Share

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಹಾಗೂ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರದ ವಿರುದ್ಧ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೂತನ ಟಿವಿಕೆ ಸರ್ಕಾರವು ಪೂರ್ಣ ಪ್ರಮಾಣದ 5 ವರ್ಷಗಳ ಅವಧಿಯನ್ನು ಪೂರೈಸುವುದಿಲ್ಲ. ಪ್ರಸ್ತುತ ಈ ಆಡಳಿತವು ಡಿಎಂಕೆಯ ಕರುಣೆಯ ಮೇಲೆ ಮಾತ್ರ ಉಳಿದುಕೊಂಡಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸ್ಟಾಲಿನ್, ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜಕೀಯ ಅಲೆಯೇನಲ್ಲ, ಅದೊಂದು ಕೇವಲ “ಸಿನಿಮಾ ಸುನಾಮಿ” ಎಂದಿದ್ದಾರೆ. ಜನರು ಕೇವಲ ನೆಚ್ಚಿನ ನಟ ಪಕ್ಷ ಸ್ಥಾಪಿಸಿದ್ದಾರೆಂಬ ಉತ್ಸಾಹ ಮತ್ತು ಸಂಭ್ರಮದಲ್ಲಿ ಮತ ಹಾಕಿದ್ದಾರೆಯೇ ವಿನಃ ಯಾವುದೇ ರಾಜಕೀಯ ಸಿದ್ಧಾಂತದಿಂದಲ್ಲ. ಇನ್ನು ಕೆಲವೇ ದಿನಗಳಲ್ಲಿ ಜನರು ಈ ಹೊಸ ಆಟಿಕೆಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳಲಿದ್ದಾರೆ. ಮಗು ತನ್ನ ತಾಯಿಯನ್ನು ಹುಡುಕುವಂತೆ ತಮಿಳುನಾಡಿನ ಮತದಾರರು ಮತ್ತೆ ಡಿಎಂಕೆ ಪಕ್ಷವನ್ನೇ ಹುಡುಕಿಕೊಂಡು ಬರಲಿದ್ದಾರೆ ಎಂದು ಭವಿಷ್ಯ ನುಡಿದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚನೆಗೆ ಬೇಕಾದ 118ರ ಸಂಖ್ಯಾಬಲದ ಬಹುಮತ ಪಡೆಯಲು ವಿಫಲವಾಗಿತ್ತು. ಚುನಾವಣಾ ಪೂರ್ವದಲ್ಲಿ ಡಿಎಂಕೆ ಮೈತ್ರಿಯಲ್ಲಿದ್ದ ಕಾಂಗ್ರೆಸ್, ವಿಸಿಕೆ (VCK) ಹಾಗೂ ಐಯುಎಂಎಲ್ (IUML) ಪಕ್ಷಗಳು ಫಲಿತಾಂಶದ ಬಳಿಕ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿ ಸಂಪುಟ ಸೇರಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸ್ಟಾಲಿನ್, ಸ್ವಂತ ಬಹುಮತವಿಲ್ಲದ ಈ ಸರ್ಕಾರ ಯಾವಾಗ ಬೇಕಾದರೂ ಪತನಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಕೇವಲ 59 ಸ್ಥಾನಗಳಿಗೆ ಕುಸಿದಿದ್ದು, ಖುದ್ದು ಸ್ಟಾಲಿನ್ ಅವರೇ ಕೊಳತ್ತೂರ್ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles