ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಟುಡೇ ಕರ್ನಾಟಕ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ರಾಜಕೀಯ ಜೀವನ, ವಂಶಪಾರಂಪರ್ಯ ಮತ್ತು ಸೈಬರ್ ಅಪರಾಧಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.
ತಮ್ಮ ತಂದೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುತ್ತಾ, “ರಾಜಕೀಯದಲ್ಲಿ ಕುಟುಂಬದ ಹಿನ್ನೆಲೆಯು ಒಂದು ಆರಂಭಿಕ ವೇದಿಕೆ ನೀಡುತ್ತದೆ ಎಂಬುದನ್ನು ಅಲ್ಲಗಳೆಯುವುದಿಲ್ಲ. ಆದರೆ, ಜನಪ್ರತಿನಿಧಿಯಾಗಲಿ ಅಥವಾ ನಟನಾಗಲಿ, ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಜನ ಅವರನ್ನು ಹೊರಹಾಕುತ್ತಾರೆ,” ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆಯನ್ನು ಉಲ್ಲೇಖಿಸಿ, “ಮೊದಲ ಬಾರಿಗೆ ಶಾಸಕರಾದ ಅವರಿಗೆ ಎದುರಾಗದ ಪ್ರಶ್ನೆಗಳು, 4 ಬಾರಿ ಶಾಸಕನಾಗಿ ಸಚಿವನಾದ ನನಗೆ ಏಕೆ ಎದುರಾಗುತ್ತಿವೆ?” ಎಂದು ಪ್ರಶ್ನಿಸಿದರು.
ಇದೇ ವೇಳೆ, ನಕಲಿ ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿವೆ ಎಂದ ಅವರು, ರಾಜ್ಯದಲ್ಲಿ ಸೈಬರ್ ಅಪರಾಧ ತಡೆಯಲು ‘ಇನ್ಫರ್ಮೇಷನ್ ಡಿಸಾರ್ಡರ್ ಟ್ರಾಫಿಕ್ ಯುನಿಟ್’ ಶೀಘ್ರವೇ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಈ ಘಟಕವು ವಾಕ್ ಸ್ವಾತಂತ್ರ್ಯವನ್ನು ಕಸಿಯುವುದಿಲ್ಲ, ಬದಲಿಗೆ ಮಾಧ್ಯಮ ತಜ್ಞರನ್ನೊಳಗೊಂಡ ಸಮಿತಿಯು ನಕಲಿ ಮಾಹಿತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವಿಷಯಗಳನ್ನು ಪರಿಶೀಲಿಸಲಿದೆ ಎಂದರು.





Leave a comment