Home ಕ್ರೈಂ ನ್ಯೂಸ್ ಅಹಿಂದ, ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದ್ದ ಸೈಯದ್ ಸೈಫುಲ್ಲಾರು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಕೊಡುಗೆಗಳೇನು?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅಹಿಂದ, ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದ್ದ ಸೈಯದ್ ಸೈಫುಲ್ಲಾರು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಕೊಡುಗೆಗಳೇನು?

Share
ಅಹಿಂದ
Share

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಕೀಯ ಪುನರ್ಜನ್ಯ ನೀಡಿದ್ದೇ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಉಪಚುನಾವಣೆ. ಇದಕ್ಕೂ ಮುನ್ನ ಅಹಿಂದ ಸಮಾವೇಶ ನಡೆಸಿ ರಾಜ್ಯಾದ್ಯಂತ ಸಂಚರಿಸಿ ರಾಜ್ಯದ ಜನರ ಮನ ಗೆದ್ದಿದ್ದರು. ಅಹಿಂದ ನಾಯಕನಾಗಿ ಜನಪ್ರಿಯ ನೇತಾರನಾಗಿ ಹೊರಹೊಮ್ಮಿದ್ದು ಆಗಲೇ. ಈ ಎರಡೂ ಘಟನೆಗಳಲ್ಲಿ ಸಿದ್ದರಾಮಯ್ಯರ ಪರ ನಿಂತವರು ದಾವಣಗೆರೆಯ ಹಿರಿಯ ಕಾಂಗ್ರೆಸ್ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ಸಾಬ್.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಿಧನರಾದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ಆತ್ಮೀಯರಾಗಿದ್ದವರು. ಅದೇ ರೀತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜೊತೆಯಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದರು.

ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಹಿಂದ ಇಲ್ಲವೇ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತಿತ್ತು. ಆಗ ಸೈಯದ್ ಸೈಫುಲ್ಲಾ ಅವರ ಹೆಸರು ಮುಂಚೂಣಿಯಲ್ಲಿತ್ತು.

1994ರಲ್ಲೇ ಮುಂಚೂಣಿಯಲ್ಲಿದ್ದ ನಾಯಕ:

ಸೈಯದ್ ಸೈಫುಲ್ಲಾ ಅವರು 1994ರಲ್ಲಿಯೇ ಕಾಂಗ್ರೆಸ್ ನಲ್ಲಿ ಪ್ರಭಾವ ಹೊಂದಿದವರು. ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಜಾಫರ್ ಷರೀಫ್ ಅವರು ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಲು ಕಾರಣವಾಗಿದ್ದರು. ಮಾತ್ರವಲ್ಲ ದಾವಣಗೆರೆಗೆ ಬಂದಾಗ ಈ ಮಾತನ್ನು ಸ್ವತಃ ಜಾಫರ್ ಷರೀಫ್ ಅವರೇ ಹೇಳಿದ್ದರು. ಸೈಯದ್ ಸೈಫುಲ್ಲಾ ಅವರಿಗೆ ದಾವಣಗೆರೆಯಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಮುಂದೆ ಅವಕಾಶಗಳಿವೆ ಎಂದು ಆಗ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ನೀಡಲಾಗಿತ್ತು.

ಕೆಪಿಸಿಸಿ ಕಾರ್ಯದರ್ಶಿಗಳಾಗಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯ ಉಪಾಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ದಾವಣಗೆರೆಯಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ಸೈಯದ್ ಸೈಫುಲ್ಲಾ ಅವರು ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿ ಫಾರಂ ಸಿಕ್ಕಿತ್ತಾದರೂ ಕೊನೆಗೆ ಕಣದಿಂದ ಹಿಂದೆ ಸರಿಯಬೇಕಾಯಿತು.

26 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಸೈಯದ್ ಸೈಫುಲ್ಲಾ:

2013ರ ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಮಾತ್ರವಲ್ಲ, ಗೆಲುವಿಗೆ ಸಾಕಷ್ಟು ಶ್ರಮಿಸಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ತೀವ್ರ ಪೈಪೋಟಿ ನೀಡಿ ಗಮನ
ಸೆಳೆದಿದ್ದರು.

ಸಿದ್ದರಾಮಯ್ಯರ ರಾಜಕೀಯ ಉತ್ತುಂಗದಲ್ಲಿ ಸೈಯದ್ ಸೈಫುಲ್ಲರ ಪಾತ್ರ:

ಮೊದಲಿನಿಂದಲೂ ಸಿದ್ದರಾಮಯ್ಯರಿಗೆ ಸೈಯದ್ ಸೈಫುಲ್ಲ ಅವರು ಆಪ್ತರು. 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯರ ಪರವಾಗಿ ಹೋರಾಟ ಮಾಡಿದವರು. ಬರೋಬ್ಬರಿ 20 ದಿನಗಳ ಕಾಲ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದ್ದು ಓಡಾಡಿ ಗೆಲ್ಲಿಸಿದ್ದರು. ಮುಸ್ಲಿಂ ಸಮುದಾಯದ ಮತಗಳು ಬರುವಂತೆ ಮಾಡಿದ್ದರು. ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ನಿಲ್ಲಿಸಿದ್ದರೂ, ಜೆಡಿಎಸ್ ನ ಸಾಂಪ್ರಾದಾಯಿಕ ಮುಸ್ಲಿಂ ಮತಗಳು ಸಿದ್ದರಾಮಯ್ಯರಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದು ಸಿದ್ದರಾಮಯ್ಯರಿಗೂ ಗೊತ್ತು.

ಅಹಿಂದ ಸಮಾವೇಶ:

ಇನ್ನು ಸಿದ್ದರಾಮಯ್ಯರು ಅಹಿಂದ ಸಮಾವೇಶ ಆಯೋಜನೆ ಮಾಡುವಾಗ, ರಾಜ್ಯಾದ್ಯಂತ ಸಂಚರಿಸುವಾಗ ಸೈಯದ್ ಸೈಫುಲ್ಲ ಅವರು ಬೆನ್ನೆಲುಬಾಗಿ ನಿಂತಿದ್ದರು. ಅಂದಿನಿಂದ ಸಿದ್ದರಾಮಯ್ಯರ ಮತ್ತಷ್ಟು ಹತ್ತಿರವಾದರು. ಅಹಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಹುಬ್ಬಳ್ಳಿ, ಹಾಸನ, ಮೈಸೂರು, ತುಮಕೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಮಾವೇಶ ನಡೆದಾಗಲೂ ಮುಂಚೂಣಿಯಲ್ಲಿದ್ದ ನಾಯಕ ಸೈಯದ್ ಸೈಫುಲ್ಲ ಅವರು.

ಸಿದ್ದರಾಮಯ್ಯರು ರಾಜಕೀಯ ಉತ್ತುಂಗಕ್ಕೇರಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೂ ಸೈಯದ್ ಸೈಫುಲ್ಲಾ ಮತ್ತು ಸಿದ್ದರಾಮಯ್ಯರ ನಡುವಿನ ಆಪ್ತತೆ ಕಡಿಮೆಯಾಗಿರಲಿಲ್ಲ. ಸಿದ್ದರಾಮಯ್ಯರ ಬೆಳವಣಿಗೆಯಲ್ಲಿ
ಸೈಯದ್ ಸೈಫುಲ್ಲ ಅವರ ಪರಿಶ್ರಮ ಸಾಕಷ್ಟಿದೆ. ಆದರೆ ಅವರು ಒಮ್ಮೆಯೂ ವಿಧಾನ ಪರಿಷತ್ ಸದಸ್ಯರಾಗಲೀ, ಶಾಸಕರಾಗಲೀ ಆಗಲೇ ಇಲ್ಲ.

ದಾಖಲೆ ಮತಗಳಲ್ಲಿ ಗೆಲುವು:

ದಾವಣಗೆರೆ ನಗರಸಭೆ ಚುನಾವಣೆಗೆ ವಾರ್ಡ್ 3 ರಿಂದ ಸ್ಪರ್ಧಿಸಿ ದಾಖಲೆ ಮತಗಳಿಂದ ಜಯಭೇರಿ ಬಾರಿಸಿದ್ದರು. ಈ ವಾರ್ಡ್ ಚುನಾವಣೆಯಲ್ಲಿ ಒಮ್ಮೆ 5 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಭಾರೀ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿ
1990ರ ದಶಕದಲ್ಲಿ ಗಮನ ಸೆಳೆದಿದ್ದರು.

ದಾವಣಗೆರೆ

ಮಿಲ್ಲತ್ ವಿದ್ಯಾಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದರು. ರಾಜಕೀಯ ಜೀವನದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಸೈಯದ್ ಸೈಫುಲ್ಲ ಅವರು, ಶಾಮನೂರು ಶಿವಶಂಕರಪ್ಪರು ಐದು ಚುನಾವಣೆಗಳಲ್ಲಿ ಗೆಲ್ಲಲು ಸಾಕಷ್ಟು ಶ್ರಮಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಈ ಚುನಾವಣೆಯಲ್ಲಿಯೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಆಗುವಂತೆ ಶ್ರಮಿಸಿದವರಲ್ಲಿ ಒಬ್ಬರು.

ಇಷ್ಟೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ, ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿಯೂ ಹೆಜ್ಜೆ ಗುರುತು ಉಳಿಸಿರುವ ಸೈಯದ್ ಸೈಫುಲ್ಲಾ ಅವರು ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ಕೊಂಡಿ, ಸಿದ್ದರಾಮಯ್ಯರ ಆಪ್ತರಾಗಿದ್ದ ಸೈಫುಲ್ಲಾ ಅವರು ಕಾಂಗ್ರೆಸ್ ಗೆ ನೀಡಿರುವ ಕೊಡುಗೆ ಅಪಾರ.

Share

Leave a comment

Leave a Reply

Your email address will not be published. Required fields are marked *