ದಾವಣಗೆರೆ: ದಾವಣಗೆರೆ ಪಟ್ಟಣದಲ್ಲಿ ‘ಮಿಲ್ಲತ್’ ಹೆಸರಿನಲ್ಲಿ ಅತೀ ದೊಡ್ಡ ಶಾಲೆಯನ್ನು ಸ್ಥಾಪಿಸಿ, ಬಹುಸಂಖ್ಯಾತ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಉತ್ತಮ ಶಿಕ್ಷಣ ನೀಡಿದ ಶೈಕ್ಷಣಿಕ ಹರಿಕಾರ ಸೈಫುಲ್ಲಾ ಸಾಬ್ ನಿಧನರಾದ ಸುದ್ದಿ ನಿಜಕ್ಕೂ ಅರಗಿಸಲಾಗುತ್ತಿಲ್ಲ.
ಸಮಾಜದ ಬಗ್ಗೆ ಅಪಾರ ಕಾಳಜಿಯುಳ್ಳ ಸೈಫುಲ್ಲಾ ಸಾಬ್ ಅದಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು. ಬಹುಶಃ ಮಿಲ್ಲತ್ ದಾವಣಗೆರೆ ಪಟ್ಟಣದಲ್ಲಿಯೇ ನಮ್ಮ ಸಮಾಜದ ಮೊದಲ ಶಾಲೆ. KG ಯಿಂದ PG ವರೆಗೆ ಇರುವ ಈ ಶಿಕ್ಷಣಾಲಯದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ದಾವಣಗೆರೆ ಪಟ್ಟಣದಲ್ಲಿ ಮುಈನುಸುನ್ನಾ ಇದೀಗ ಮುನ್ನಡೆಸುತ್ತಿರುವ ಪುರಾತನ ಶಿಕ್ಷಣ ಸಂಸ್ಥೆಯಾದ ‘ದಾರುಲ್ ಉಲೂಂ ರಹ್ಮಾನಿಯ’ದ ನಿರ್ದೇಶಕರಾಗಿ ನಮಗೆ ನಾಯಕತ್ವ ನೀಡಿದ್ದರು.
ಮಿಲ್ಲತ್ ಶಿಕ್ಷಣ ಸಂಸ್ಥೆಯ ಪ್ರಗತಿ ಹಾಗೂ ಸಮಾಜದ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಹಲವು ಬಾರಿ ನಾವು ಚರ್ಚೆ ನಡೆಸಿದ್ದೇವೆ. ಆ ಶಿಕ್ಷಣ ಸಂಸ್ಥೆಗೆ ಡೈರೆಕ್ಟರ್ ಆಗಿ ನಿಲ್ಲಬೇಕೆಂದು ಕೂಡಾ ಅವರು ನನ್ನಲ್ಲಿ ಹೇಳಿದ್ದರು. ಆದರೆ, ಈಗಾಗಲೇ ನಾಲ್ಕು ಶಾಲೆಗಳ ಸಹಿತ ಮೇಕ್ ಫೌಂಡೇಶನಿನ ಹತ್ತು ಹಲವು ಶಿಕ್ಷಣ ಸಂಸ್ಥೆಗಳ ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಯ ಒತ್ತಡವಿರುವುದರಿಂದ, ಪೂರ್ಣ ಜವಾಬ್ದಾರಿ ವಹಿಸದಿದ್ದರೂ ಸಾಧ್ಯವಿರುವ ಸಣ್ಣಪುಟ್ಟ ಬೆಂಬಲ ನೀಡುತ್ತಿದ್ದರು. ಮಿಲ್ಲತ್ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ವ್ಯವಸ್ಥೆಗೆ ‘ಮಿದಾದ್’ ಎಂಬ ಹೆಸರನ್ನು ಕೂಡ ನಾನೇ ಸೂಚಿಸಿದ್ದೆ.
ಸುಮಾರು ನಾಲ್ಕು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿ, ಮುಂದಿನ ನಮ್ಮ ‘ಅಕ್ಷರೋತ್ಸವ ಮಹಾ ಸಂಗಮ’ವನ್ನು ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನಡೆಸುವ ಕುರಿತು ಸಮಾಲೋಚನೆ ಮಾಡಿದ್ದೆವು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡು ಎಲ್ಲಾ ರೀತಿಯ ಬೆಂಬಲದ ಭರವಸೆ ನೀಡಿದ್ದರು. ಚುನಾವಣೆ ಮುಗಿದ ತಕ್ಷಣ ಕಾರ್ಯೋನ್ಮುಖರಾಗಲು ಬಯಸಿದ್ದ ನಮ್ಮ ತಂಡಕ್ಕೆ ಈ ಸುದ್ದಿ ನಿಜಕ್ಕೂ ಆಘಾತ ತಂದಿದೆ. ಸಮಾಜದ ಏಳಿಗೆಗಾಗಿ ಸದಾ ಮಿಡಿಯುತ್ತಿದ್ದ ಆ ವ್ಯಕ್ತಿಗೆ ಅಲ್ಲಾಹನು ಮಗ್ಫಿರತ್ ನೀಡಿ, ಜನ್ನತ್ ಕರುಣಿಸಲಿ. ಆಮೀನ್.
ಮಿಲ್ಲತ್ ಸಂಸ್ಥೆಗಾಗಿ ಶ್ರಮಿಸಿದ ಸೈಫುಲ್ಲಾರಿಗೆ ನಿಮ್ಮ ಪ್ರಾರ್ಥನೆ ಇರಲಿ.
~ ಮುಸ್ತಫಾ ನಈಮಿ ಹಾವೇರಿ
ಮ್ಯಾನೇಜಿಂಗ್ ಡೈರೆಕ್ಟರ್, ಮೇಕ್ ಫೌಂಡೇಶನ್
ಸವಣೂರು.
- Aksharotsava Maha Sangama
- Darul Uloom Rahmania
- DAVANAGERE NEWS
- Educational Pioneer
- MAKE Foundation.
- Midad Alumni Association
- Millat Educational Institution Davanagere
- Mustafa Nayeemi Haveri
- Saifulla Saab
- ಅಕ್ಷರೋತ್ಸವ ಮಹಾ ಸಂಗಮ
- ದಾರುಲ್ ಉಲೂಂ ರಹ್ಮಾನಿಯ
- ದಾವಣಗೆರೆ ಸುದ್ದಿ
- ಮಿದಾದ್ ಹಳೆಯ ವಿದ್ಯಾರ್ಥಿಗಳ ಸಂಘ
- ಮಿಲ್ಲತ್ ಶಿಕ್ಷಣ ಸಂಸ್ಥೆ ದಾವಣಗೆರೆ
- ಮುಸ್ತಫಾ ನಈಮಿ ಹಾವೇರಿ
- ಮೇಕ್ ಫೌಂಡೇಶನ್.
- ಶೈಕ್ಷಣಿಕ ಹರಿಕಾರ
- ಸೈಫುಲ್ಲಾ ಸಾಬ್






Leave a comment