SUDDIKSHANA KANNADA NEWS/ DAVANAGERE/ DATE:14-01-2024
ದಾವಣಗೆರೆ: ಅಡಿಕೆ ದುಡ್ಡಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿ ಬಂದಿರುವ ಆರೋಪ ವಿಚಾರ ಗಂಭೀರವಾಗಿ ಪರಿಗಣಿಸಿರುವ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಆರೋಪ ಮಾಡಿರುವ ಸ್ವಾಮಿ ಮತ್ತು ಅನುಪಮಾ ಕೂಡಲೇ ಬಂಧಿಸಿ, ಶಿಕ್ಷೆಗೊಳಪಡಿಸಬೇಕು. ತೇಜೋವಧೆ ಹಾಗೂ ತೇಜೋವಧೆ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಹಾಕಬೇಕು ಎಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ಟ್ರಾಕ್ಸಿ ಚಾಲಕ. ನಮ್ಮ ಕಾರಿನ ಚಾಲಕನಾಗಿರಲಿಲ್ಲ. ಆದರೂ ವಿನಾಕಾರಣ ಆರೋಪ ಮಾಡಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ನಡೆದ ಘಟನೆ. ಆದ್ರೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬಹಿರಂಗವಾಗಿ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿ ನನ್ನ ಮೇಲೆ ಆರೋಪ ಮಾಡಿದ್ದಾನೆ. ಆದ್ರೆ, ಯಾವುದೇ ಆಧಾರವಿಲ್ಲದೇ ಆರೋಪ ಮಾಡಿರುವುದು ಸತ್ಯಕ್ಕೆ ದೂರ ಆದದ್ದು. ಹಾಗಾಗಿ, ಮೊದಲು ಪೊಲೀಸರಿಗೆ ದೂರು ನೀಡಿ ಆ ನಂತರ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಾಮಿ ಮತ್ತು ಅನುಪಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಘಟನೆ ಈಗ ಯಾಕೆ ಬಂತು ಎಂಬುದೇ ಕುತೂಹಲ ಮತ್ತು ಆಶ್ಚರ್ಯಕರ. ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ. ಎಸ್ಪಿ ಅವರ ಗಮನಕ್ಕೆ ತರುತ್ತೇನೆ. ಆಧಾರಹಿತ ಆರೋಪ ಮಾಡಲಾಗಿದೆ. ಮೂರು ತಿಂಗಳ ಬಳಿಕ ಯಾಕೆ ಆರೋಪ ಮಾಡಿದ, 93 ಲಕ್ಷ ರೂಪಾಯಿ ಯಾಕೆ ವಾಪಸ್ ಕೊಟ್ಟ ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಮಮಂದಿರ ನಿರ್ಮಾಣ, ಆಯುಷ್ಮಾನ್ ಭವ, ಪಿಎಂ ಕಿಸಾನ್ ಸಮ್ಮಾನ್, ಉಜ್ವಲ, ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣ ಸೇರಿದಂತೆ ದೇಶದೆಲ್ಲೆಡೆ ಅಭಿವೃದ್ಧಿ ಪರ್ವವೇ ಹರಿದಿದೆ. ಈ ಬಾರಿ ಲೋಕಸಭೆ ಚುನಾವಣೆಗೆ ನನಗೆ ಟಿಕೆಟ್ ನೀಡುವುದು ಖಚಿತ. ಹಾಗಾಗಿ, ನಾಲ್ಕು ಬಾರಿ ಗೆದ್ದಿದ್ದಾರೆ. ಐದನೇ ಬಾರಿ ಗೆಲ್ಲಬಾರದು ಎಂಬ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರ ಬರಬೇಕು ಎಂದು ಹೇಳಿದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಸುದ್ದಿ ಪ್ರಸಾರ ಆದ ಕಾರಣಕ್ಕೆ ಯಾರೋ ಮಾಡಿರಬಹುದು ಎಂದು ಸುಮ್ಮನಿದ್ದೆ. ಆದ್ರೆ, ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುತ್ತೇವೆ ಎಂದ ಬಳಿಕ ಅನುಮಾನ ಹೆಚ್ಚಾಗಿದೆ. ಮೊದಲು ಭಯ ಇರಲಿಲ್ಲ, ಲೋಕಸಭೆ ಚುನಾವಣೆ ವರ್ಷವಾಗಿರುವ ಕಾರಣಕ್ಕೆ ಭಯ ಇದೆ. ಅಟ್ಯಾಕ್ ಮಾಡಬಹುದು ಎಂಬ ಆತಂಕವೂ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದಿದ್ದೇನೆ. ಐದನೇ ಬಾರಿಯೂ ಗೆಲ್ಲುತ್ತಾರೆ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ನಿಂದನೆ, ಅಪನಿಂದನೆ, ತೇಜೋವಧೆ, ಮಾನಹಾನಿ ಸೇರಿದಂತೆ ವಿನಾಕಾರಣ ಆರೋಪ ಮಾಡಿದರೆ ತಕ್ಷಣವೇ ದೂರು ಕೊಟ್ಟು ಪೊಲೀಸರು ಬಂಧಿಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹಾಜರಿದ್ದರು.
ಎಸ್ಪಿ ಉಮಾ ಪ್ರಶಾಂತ್ ಭೇಟಿ:
ಇನ್ನು ಸಿದ್ದೇಶ್ವರ ಅವರು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಜಿಎಂಐಟಿಗೆ ದೌಡಾಯಿಸಿದರು. ಈ ಸಂಬಂಧ ಸಿದ್ದೇಶ್ವರ ಅವರು ಕೊಟ್ಟ ದೂರು ಪಡೆದಿದ್ದು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಸಂಸದ ಜಿ. ಎಂ. ಸಿದ್ದೇಶ್ವರ ಅವರ ಜೊತೆ ಎಸ್ಪಿ ಉಮಾ ಪ್ರಶಾಂತ್ ಅವರು ಮಾತುಕತೆ ನಡೆಸಿದರು. ಪ್ರಕರಣ ಕುರಿತಂತೆ ಮಾಹಿತಿ ಪಡೆದರು. ಮಾತ್ರವಲ್ಲ, ಬೆಂಗಳೂರು ವಕೀಲರು, ದಾವಣಗೆರೆ ವಕೀಲರ ಜೊತೆ ಸಮಾಲೋಚನೆ ನಡೆಸಿರುವ ಸಿದ್ದೇಶ್ವರ ಅವರು, ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು, ವಕೀಲರು ಹಾಗೂ ಪೊಲೀಸರ ಜೊತೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂದಿನ ಕಾನೂನು ಹೋರಾಟದ ಕುರಿತೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿದ್ದೇಶ್ವರ ಅವರು ಮಾಹಿತಿ ನೀಡಿದರು.