SUDDIKSHANA KANNADA NEWS/ DAVANAGERE/ DATE:18-12-2024
ದಾವಣಗೆರೆ: ಗ್ರಾಮೀಣ ಸರ್ಕಾರಿ ಶಾಲೆಗಳೆಂದರೆ ಕೇಳಬೇಕೆ. ಅಲ್ಲಿ ಗ್ರಂಥಾಲಯ ಇಲ್ಲ. ಶೌಚಾಲಯವೂ ಇಲ್ಲ. ಮೂಲಭೂತ ಸೌಲಭ್ಯವಂತೂ ಮರೀಚಿಕೆಯೇ ಸರಿ. ಡೆಸ್ಕ್ ಗಳಿವೆ. ಕುಳಿತುಕೊಳ್ಳಲು ಆಗೋದಿಲ್ಲ. ಆಟದ ಮೈದಾನವಿದೆ, ವಿದ್ಯಾರ್ಥಿಗಳೇ ಕಡಿಮೆ. ಹೆಚ್ಚಿನ ಮಕ್ಕಳಿದ್ದಾರೆ ಸೌಲಭ್ಯಗಳಿಲ್ಲ. ಬಡವರ ಮಕ್ಕಳ ಪಾಲಿನ ವಿದ್ಯಾಕೇಂದ್ರಗಳ ದುಃಸ್ಥಿತಿ ಇದು.
ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಹೊರಟಿರುವ ಸ್ವಾಭಿಮಾನಿ ಬಳಗವು ಹಮ್ಮಿಕೊಂಡಿರುವ ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನದಲ್ಲಿ ಕಂಡು ಬಂದ ಸಮಸ್ಯೆಗಳ ಕೆಲ ಸ್ಯಾಂಪಲ್ ಗಳು ಅಷ್ಟೇ.
ಚುನಾವಣೆಯ ಭಾಷಣ ಭಾಷಣಕ್ಕೆ ಸೀಮಿತ:
ಶಾಸಕರು, ಸಂಸದರು ಈ ಶಾಲೆಗಳತ್ತ ಮುಖ ಮಾಡದಿರುವುದೇ ದುರಂತ. ಬಡವರು, ಹಿಂದುಳಿದವರು, ಶೋಷಿತರು, ದಮನಿತರ ಪರವಾಗಿ ಹೋರಾಟ ಮಾಡುತ್ತೇವೆ, ಬದುಕು ಹಸನಾಗಿಸುತ್ತೇವೆ ಎಂಬ ಭಾಷಣ ಚುನಾವಣೆ ಸಮಯದಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳಿಂದ ಬರುವ ಭರವಸೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ನಮ್ಮ ಗುರಿ ಎನ್ನುವ ಆರಿಸಿ ಹೋದ ನಾಯಕರು ಇತ್ತ ತಲೆ ಹಾಕುವುದು ಚುನಾವಣೆ ಬಂದ ಮೇಲೆಯೇ ಎಂಬುದು ಪ್ರತಿಬಾರಿಯೂ ಗ್ರಾಮೀಣ ಭಾಗದ ಜನರು ಹೇಳುವ ಮಾತು.
ಅಭಿಯಾನಕ್ಕೆ ಸಿಕ್ತು ಭಾರೀ ಪ್ರಶಂಸೆ:
ಆದ್ರೆ, ಶೈಕ್ಷಣಿಕ ಕ್ಷೇತ್ರದಲ್ಲಿ ನಗರ ಪ್ರದೇಶಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗಬೇಕು ಎಂಬ ಸದುದ್ದೇಶದಿಂದ ಆಯೋಜನೆ ಮಾಡಿರುವ ಅಭಿಯಾನಕ್ಕೆ ಭಾರೀ ಸ್ಪಂದನೆ ಸಿಕ್ಕಿದೆ.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಯೋಗ:
ಗ್ರಾಮಸ್ಥರು, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು ಹೇಳುವ ಪ್ರಕಾರ ಕರ್ನಾಟಕ ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯೋಗ. ಇದುವರೆಗೆ ಯಾವ ಶಾಸಕರು, ಸಂಸದರು ಈ ರೀತಿಯಾಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಅವಲೋಕಿಸಿಲ್ಲ, ಚರ್ಚಿಸಿಲ್ಲ. ಪರಾಮರ್ಶಿಸಿಲ್ಲ. ಕನಿಷ್ಠ ಪರಿಸ್ಥಿತಿ ಹೇಗಿದೆ ಎಂದು ಬಂದು ನೋಡಿಲ್ಲ. ಯಾವುದೋ ಒಂದು ಶಾಲೆಗೆ ಬರುತ್ತಾರೆ. ಕಾರ್ಯಕ್ರಮ ಮುಗಿಸಿ ಹೊರಟು ಹೋಗುತ್ತಾರೆ. ಮಕ್ಕಳು, ಪೋಷಕರು, ಎಸ್ ಡಿಎಂಸಿ ಸದಸ್ಯರ ಜೊತೆ ಚರ್ಚಿಸುವುದು ವಿರಳಾತಿ ವಿರಳ.
ಎಲ್ಲೆಲ್ಲಿ ಭೇಟಿ:
ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ಶುರುವಾಗಿದ್ದು ನ್ಯಾಮತಿಯ ಸೂರಗೊಂಡನಕೊಪ್ಪ ಗ್ರಾಮದಲ್ಲಿ. ಗ್ರಾಮಕ್ಕೆ ಬರುತ್ತಿದ್ದಂತೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮಸ್ಥರು, ಮಕ್ಕಳು, ಎಸ್ ಡಿ ಎಂ ಸಿ ಸದಸ್ಯರು ವಿನಯ್ ಕುಮಾರ್ ಅವರನ್ನು ಕಂಡು ಖುಷಿಪಟ್ಟರು. ಶಾಲೆಗಳಲ್ಲಿನ ಸಮಸ್ಯೆ, ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಶಿಕ್ಷಕರ ಸಂಕಷ್ಟಗಳು, ಎಸ್ ಡಿಎಂಸಿ ಸದಸ್ಯರ ಸಲಹೆಗಳನ್ನು ಸ್ವೀಕರಿಸಿದರು. ಸಂವಾದದಲ್ಲಿ ಹತ್ತು ಹಲವು ವಿಚಾರಗಳು ಬೆಳಕಿಗೆ ಬಂದವು.
ಹಳೆ ಜೋಗ ಮತ್ತು ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳ, ಸವಳಂಗ, ಸೋಗಿಲು, ಚಟ್ನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಪರಿಸ್ಥಿತಿ ಬೇರೆ ಏನೂ ಇರಲಿಲ್ಲ. ಯಾಕೆಂದರೆ ಸರ್ಕಾರಿ ಶಾಲೆಗಳೆಂದರೆ ಮೊದಲಿನಿಂದಲೂ ನಿರ್ಲಕ್ಷ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸದೇ ಇರುವುದೇ ಇಂದಿನ ಸಮಸ್ಯೆಗೆ ಕಾರಣ ಎಂಬುದು ಪೋಷಕರ ಆರೋಪ.
ಬಹುಮುಖ ಪ್ರತಿಭೆಗಳಿಲ್ಲ ಕೊರತೆ:
ನಗರಪ್ರದೇಶಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿನ ಪ್ರತಿಭೆ ಹೆಚ್ಚೇ ಇದೆ. ಬುದ್ಧಿವಂತಿಕೆ, ಚಾಕಚಾಕತ್ಯ, ಸೃಜನಶೀಲತೆ, ಕ್ರೀಡಾ ಸಾಮರ್ಥ್ಯ ಸೇರಿದಂತೆ ಎಲ್ಲಾ ವಿಚಾರಗಳಲ್ಲಿಯೂ ಮುಂದೆ ಇದ್ದಾರೆ. ಆದ್ರೆ, ಸೂಕ್ತ ಸೌಲಭ್ಯ, ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಸಾಧ್ಯವಾಗುತ್ತಿಲ್ಲ.
ಚಿನ್ನಿಕಟ್ಟೆಗೂ ಭೇಟಿ:
ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಭಿಮಾನಿ ಬಳಗದಿಂದ ಆಯೋಜಿಸಿರುವ ಶಿಕ್ಷಣ ಅದಾಲತ್ – ನಮ್ಮ ನಡೆ ಸರಕಾರಿ ಶಾಲೆಗಳ ಕಡೆಗೆ ಅಭಿಯಾನ ಕಾರ್ಯಕ್ರಮದಲ್ಲಿ ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದ ಸ್ಫೂರ್ತಿದಾಯಕ ಮಾತುಗಳು ಮಕ್ಕಳು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರ ಮನಸ್ಸು ಮುಟ್ಟಿತು.
ಶಾಲೆಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಏನು?
ಕೇವಲ ಭೇಟಿ ನೀಡುವುದಷ್ಟೇ ಅಲ್ಲ ಸ್ವಾಭಿಮಾನಿ ಬಳಗದ ಉದ್ದೇಶ. ಇಲ್ಲೊಂದು ಮಹತ್ಕಾರ್ಯದತ್ತವೂ ಚಿಂತನೆ ನೆಟ್ಟಿದೆ. ದೊಡ್ಡ ದೊಡ್ಡ ಸಂಸ್ಥೆಗಳಿಗೆ, ಅನುದಾನ ನೀಡುವವರಿಗೆ ಸರ್ಕಾರಿ ಶಾಲೆಗಳಲ್ಲಿ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ಸಲ್ಲಿಸಿದರೆ ಅನುದಾನ ನೀಡಲಾಗುತ್ತದೆ. ಭಾರತ ದೇಶದಲ್ಲಿ ಶಿಕ್ಷಣಕ್ಕೆ ಕೇವಲ ಶೇಕಡಾ 2.1ರಷ್ಟು ಮಾತ್ರ ಹಣ ಮೀಸಲಿಡಲಾಗುತ್ತಿದೆ. ಚೀನಾದಲ್ಲಿ ಇದು ಶೇ.8ರಷ್ಟಿದೆ. ಅಂದರೆ ಎಷ್ಟು ತಾರತಮ್ಯ ಇದೆ ಎಂಬುದು ಇಲ್ಲೇ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಅನುದಾನ ನೀಡುವ ದೊಡ್ಡ ಸಂಸ್ಥೆಗಳಿಗೆ ಕೇಳಿಕೊಂಡರೆ ಅನುಕೂಲವಾಗುತ್ತದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುವ ಜೊತೆಗೆ ಮಕ್ಕಳೂ ಚೆನ್ನಾಗಿ ಓದಿ ವಿದ್ಯಾವಂತರಾಗುತ್ತಾರೆ. ಉದ್ಯೋಗಿಗಳಾಗುತ್ತಾರೆ. ಸ್ವಾವಲಂಬಿ ಜೀವನ ಸಾಗಿಸುತ್ತಾರೆ. ಸಮಾಜದಲ್ಲಿ ಉನ್ನತ ಹುದ್ದೆಗೆ ಏರುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಅದಾಲತ್ ನಡೆಸಲಾಗುತ್ತಿದೆ ಎನ್ನುತ್ತಾರೆ ಜಿ. ಬಿ. ವಿನಯ್
ಕುಮಾರ್.
ಅಹಿಂದ ವರ್ಗದವರೇ ಹೆಚ್ಚು:
ನ್ಯಾಮತಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಓದುತ್ತಿರುವುದು ಕಂಡು ಬಂದಿದೆ , ತಾಲೂಕಿನ ಹಳೆ ಜೋಗದಲ್ಲಿ ದೊಡ್ಡ ಶಾಲೆಯಿದ್ದು ಒಂದರಿಂದ ಏಳನೇ ತರಗತಿಯವರೆಗೆ 21 ಮಕ್ಕಳು ಮಾತ್ರ ಬರುತ್ತಿದ್ದಾರೆ , ಇದಕ್ಕೆ ಸರಕಾರ ಶಾಲೆಗಳು ಮಳೆಗಾಲ ಬಂದರೆ ಸೋರುತ್ತವೆ , ಶಾಲೆಗಳಲ್ಲಿ ಆಟದ ಮೈದಾನವಿಲ್ಲ , ಮೈದಾನವಿದ್ದರೂ ಯೋಗ್ಯವಾಗಿಲ್ಲ ಇವುಗಳನ್ನು ನರೇಗಾ ಯೋಜನೆಯಾಡಿಯಲ್ಲಿ ಅಭಿವೃದ್ದಿ ಮಾಡಬಹುದು ಇದರ ಮಾಹಿತಿ ಶಾಲಾ ಅಭಿವೃದ್ದಿ ಸಮಿತಿಗೆ ಇಲ್ಲದ ಕಾರಣ ಸರಕಾರದ ಅಥವಾ ಸ್ಥಳೀಯ ಆಡಳಿತ ಮಂಡಳಿಯನ್ನು ಕಾಯುತ್ತಿದ್ದಾರೆ. ಇದು ಮಕ್ಕಳ ಶಿಕ್ಷಣ, ಪಠ್ಯೇತರ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ಎಲ್ಲಾ ತಾಲೂಕುಗಳಲ್ಲಿಯೂ ಅಭಿಯಾನ:
ಶಿಕ್ಷಣ ಅದಾಲತ್ – ನಮ್ಮ ನಡೆ ಸರಕಾರಿ ಶಾಲೆಗಳ ಕಡೆಗೆ ಅಭಿಯಾನ ಕಾರ್ಯಕ್ರಮವು ತಿಂಗಳಲ್ಲಿ ಎರಡು ಬಾರಿ ಮಾತ್ರ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಗೂ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳಲ್ಲಿ ಐಎಎಸ್, ಕೆ ಎಸ್
ಸೇರಿದಂತೆ ಉನ್ನತ ಹುದ್ದೆಗಳ ಪರಿಚಯಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಫಾರಂನಲ್ಲಿ ದಾಖಲು:
ಭೇಟಿ ನೀಡಿದ ಶಾಲೆಯಲ್ಲಿ ಸ್ವಾಭಿಮಾನಿ ಬಳಗದ ತಂಡದಿಂದ 29 ಪ್ರಶ್ನೆಗಳನ್ನು ಒಳಗೊಂಡ ಮಾದರಿಯಲ್ಲಿ ಶಾಲೆಯ ವಿವರವನ್ನು ಫಾರಂನಲ್ಲಿ ಮಾಹಿತಿ ದಾಖಲಿಸಿ, ಶಿಕ್ಷಕರ , ಎಸ್ಡಿಎಂಸಿ ಸದಸ್ಯರ ಪೋಷಕರ ಹಾಗೂ ಶಾಲಾ ಮಕ್ಕಳೊಂದಿಗೆ ಸಂವಾದವನ್ನು ನಡೆಸಿ ಭಾರತ ಸಂವಿಧಾನ ಪೀಠಿಕೆ ಓದಿ ಮಕ್ಕಳಲ್ಲಿ ಪ್ರಮಾಣ ಮಾಡಿಸುವ ಮೂಲಕ ಒಂದು ಫೋಟೋವನ್ನು ಶಾಲೆಗೆ ನೀಡಿದರು.
ತಾಲೂಕಿನ ಸೂರಗೊಂಡನಕೊಪ್ಪ, ಹಳೆ ಜೋಗ, ಹೊಸ ಜೋಗ, ಮಾದಾಪುರ, ಕೂಡತಾಳ್, ಸವಳಂಗ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಕೊಠಡಿ ಮೈದಾನ ಬಿಸಿ ಊಟ ಯೋಜನೆ ಶೌಚಾಲಯ ಭದ್ರತೆ ಶಿಕ್ಷಣದ ಗುಣಮಟ್ಟಗಳ ಪರಿಶೀಲನೆ
ನಡೆಸಿದರು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಬಳಗದ ರಾಜ್ಯ ಕಾರ್ಯದರ್ಶಿ ರಾಜು ಮೌರ್ಯ, ರಾಜ್ಯ ಸಂಚಾಲಕ ಅಯ್ಯಣ್ಣ, ಶಿವಕುಮಾರ್ ಸಾಂಬಳ್ಳಿ, ಹೊನ್ನಾಳಿ ರಾಜು ಕಡಗಣ್ಣರ, ಪ್ರದೀಪ್, ಗಂಜೀನಹಳ್ಳಿ ನಾಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.