ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರನ್ನು ‘ಗುಂಗಿ ಗುಡಿಯಾ’ (ಮೌನ ಗೊಂಬೆ) ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಸಿಪಿ ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತೀವ್ರ ವೈಚಾರಿಕ ದಿವಾಳಿತನ ಎದುರಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಬೀಡ್ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸುನೇತ್ರಾ ಪವಾರ್ ಅವರಿಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಪಕ್ಕದಲ್ಲಿದ್ದ ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಅವರು ಉತ್ತರ ನೀಡದಂತೆ ತಡೆದಿದ್ದರು ಎನ್ನಲಾದ ವಿಡಿಯೋವನ್ನು ಮಹಾರಾಷ್ಟ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ವೇಳೆ ಸುನೇತ್ರಾ ಪವಾರ್ ಅವರನ್ನು ‘ಗುಂಗಿ ಗುಡಿಯಾ’ ಎಂದು ಸಂಬೋಧಿಸಿ ಕಾಂಗ್ರೆಸ್ ವ್ಯಂಗ್ಯ ಮಾಡಿತ್ತು.
ಎನ್‌ಸಿಪಿ ತಿರುಗೇಟು ಹಾಗೂ ಎಚ್ಚರಿಕೆ:
ಕಾಂಗ್ರೆಸ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸುನಿಲ್ ತಟ್ಕರೆ, “ಕೇವಲ ಕ್ಷಮೆಯಾಚನೆ ಅಥವಾ ವಿಷಾದ ವ್ಯಕ್ತಪಡಿಸುವುದರಿಂದ ಈ ವಿಚಾರ ಮುಗಿಯುವುದಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ವಿವೇಚನೆ ಇರಬೇಕು” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇದೇ ವೇಳೆ ತಮ್ಮದೇ ಪಕ್ಷದ ನಾಯಕ ಧನಂಜಯ್ ಮುಂಡೆ ಅವರ ನಡೆಗೂ ಅಸಮಾಧಾನ ವ್ಯಕ್ತಪಡಿಸಿದ ತಟ್ಕರೆ, “ಸುದ್ದಿಗೋಷ್ಠಿ ಮುಖ್ಯ ವ್ಯಕ್ತಿಗೆ ಸೇರಿದ್ದು. ಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.





Leave a comment