ಝಾನ್ಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬಬಿನಾ ಪಟ್ಟಣದಲ್ಲಿ ಏಳು ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿಯ ಜೀವನ ದುರಂತದಲ್ಲಿ ಅಂತ್ಯವಾಗಿದೆ. ಗಂಡ-ಹೆಂಡತಿ ನಡುವೆ ನಡೆದ ತೀವ್ರ ಜಗಳದ ನಂತರ ಪತಿ ವಿಷ ಸೇವಿಸಿದ್ದು, ಪತ್ನಿ ಮನೆಯಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸಂಭವಿಸಿದ್ದು ಏನು?
ಪೊಲೀಸರ ಮಾಹಿತಿ ಪ್ರಕಾರ, ಸಾಗರ್ ಸಾಹು ಹಾಗೂ ರಾಧಾ ದಂಪತಿ ಇತ್ತೀಚೆಗಷ್ಟೇ ಮಧ್ಯಪ್ರದೇಶದ ಅಶೋಕನಗರದಿಂದ ಬಬಿನಾಗೆ ಆಗಮಿಸಿದ್ದರು. ಸೋಮವಾರ ರಾತ್ರಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ಬೆನ್ನಲ್ಲೇ ಪತಿ ಸಾಗರ್ ಸಾಹು ವಿಷ ಸೇವಿಸಿದ್ದಾನೆ. ಆತನ ಸ್ಥಿತಿ ಕ್ಷೀಣಿಸಿದಾಗ ಕುಟುಂಬಸ್ಥರು ತಕ್ಷಣ ಬಬಿನಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತ ತೀವ್ರ ನಿಗಾ ಘಟಕದಲ್ಲಿದ್ದು (ICU), ಸ್ಥಿತಿ ಗಂಭೀರವಾಗಿದೆ.
ಇತ್ತ ಸಾಗರ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪತ್ನಿ ರಾಧಾ ಮನೆಯಲ್ಲೇ ಉಳಿದುಕೊಂಡಿದ್ದಳು. ಕುಟುಂಬಸ್ಥರು ಆಸ್ಪತ್ರೆಯಿಂದ ಹಿಂತಿರುಗಿದಾಗ, ಆಕೆ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ವರದಕ್ಷಿಣೆ ಹತ್ಯೆ ಆರೋಪ ಮಾಡಿದ ಹೆಣ್ಣಿನ ಕಡೆಯವರು:
ಇದು ಆತ್ಮಹತ್ಯೆ ಅಲ್ಲ, ಬದಲಿಗೆ ವರದಕ್ಷಿಣೆಗಾಗಿ ನಡೆಸಿದ ಕೊಲೆ ಎಂದು ರಾಧಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ರಾಧಾ ಅವರ ಮಾವ ಮಾತನಾಡಿ, “ಇಬ್ಬರೂ ಪ್ರೀತಿಸಿ ಎರಡೂ ಕುಟುಂಬಗಳ ಒಪ್ಪಿಗೆಯಂತೆ 2025ರ ನವೆಂಬರ್ 25 ರಂದು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಗಂಡನ ಕಡೆಯವರು 10 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟು ಹಿಂಸೆ ನೀಡುತ್ತಿದ್ದರು. ಹಣ ತರದಿದ್ದರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಹಣ ನೀಡದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ತೂಗುಹಾಕಿದ್ದಾರೆ” ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ:
ಮದುವೆಯಾಗಿ ಏಳು ವರ್ಷಗಳ ಒಳಗಾಗಿ ಈ ದುರಂತ ಸಂಭವಿಸಿರುವುದರಿಂದ ಕಾನೂನಿನ ಪ್ರಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಮತ್ತು ವಿಧಿವಿಜ್ಞಾನ (Forensic) ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಬಿನಾ ಪೊಲೀಸರು ತಿಳಿಸಿದ್ದಾರೆ.





Leave a comment