SUDDIKSHANA KANNADA NEWS/ DAVANAGERE/ DATE:08-11-2024
ದಾವಣಗೆರೆ: ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮಪ್ಪ (35) ಆತ್ಮಹತ್ಯೆಗೆ ಶರಣಾದ ರೈತ. ಭದ್ರಾವತಿ ತಾಲೂಕಿನ ಹಂಚಿನಸಿದ್ಧಾಪುರದಲ್ಲಿ ಎರಡು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ರಾಮಪ್ಪ ಅವರು, ಕೆಲಸ ಬಿಟ್ಟು ಹೊಸಹಳ್ಳಿ ಗ್ರಾಮದ ತಾಯಿಯ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಆದ್ರೆ, ಜಮೀನು ಮತ್ತು ಉಳುಮೆಗಾಗಿ ಕೃಷಿ ಚಟುವಟಿಕೆಗಳಿಗೆ ಲಿಂಗಾಪುರದ ಪ್ರಗತಿ ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವೆಡೆ ಸಾಲ ಮಾಡಿದ್ದರು. ಕೈಸಾಲವನ್ನೂ ಮಾಡಿದ್ದರಲ್ಲದೇ, ಬೆಳೆ ಬಾರದೇ ನೊಂದಿದ್ದರು. ಸಾಲದ ಒತ್ತಡ ಹೆಚ್ಚಾದ ಕಾರಣ ಮನನೊಂದು ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಮೃತನ ಪತ್ನಿ ಅನಿತಾ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.