ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ಪಾಲಿಕೆಯ ಕನ್ನಡ ರಾಜ್ಯೋತ್ಸವದಲ್ಲಿ ಟಿಪ್ಪು ಸ್ತಬ್ಧಚಿತ್ರ! ನೋಡ್ತಿದ್ದಂತೆ ಬಿಜೆಪಿ ಸದಸ್ಯರು ಮಾಡಿದ್ದೇನು..? ಮುಂದೇನಾಯ್ತು..?

On: November 29, 2024 10:22 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-11-2024

ದಾವಣಗೆರೆ: ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಹಾಗೂ ಫೋಟೋ ಅಳವಡಿಸಿರುವ ವಾಹನ ಬರುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮಹಾನಗರ ಪಾಲಿಕೆ, ವಿವಿಧ ಕನ್ನಡಪರ ಸಂಘಟನೆಗಳು, ಪತ್ರಕರ್ತರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಒಂದೊಂದೇ ಸ್ತಬ್ಧಚಿತ್ರಗಳು ಬರುತ್ತಿದ್ದಂತೆ ಮೆರವಣಿಗೆಯು ವಿಜೃಂಭಣೆಯಿಂದ ನಡೆಯುತಿತ್ತು. ಈ ವೇಳೆ ಟಿಪ್ಪು ಸುಲ್ತಾನ್ ಸ್ತಬ್ಧ ಚಿತ್ರ ಕಣ್ಣಿಗೆ ಬೀಳುತ್ತಿದ್ದಂತೆ ಪಾಲಿಕೆಯ ಬಿಜೆಪಿ ಸದಸ್ಯರು ಕೆಂಡಮಂಡಲರಾದರು. ವಿಪಕ್ಷ ನಾಯಕ ಪ್ರಸನ್ನಕುಮಾರ್, ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯರಾದ ಎಸ್. ಟಿ. ವೀರೇಶ್, ಕೆ. ಎಂ. ವೀರೇಶ್ ಮತ್ತಿತತರು ಟಿಪ್ಪು ಸುಲ್ತಾನ್ ಕುರಿತ ಸ್ತಬ್ಧಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು.

ತೆರೆದ ವಾಹನದಲ್ಲಿ ಹುಡುಗನನ್ನು ಟಿಪ್ಪು ಸುಲ್ತಾನ್ ರೀತಿಯ ವೇಷ ಧರಿಸಿ ಕೂರಿಸಲಾಗಿತ್ತು. ಮಾತ್ರವಲ್ಲ, ವಾಹನದ ಹಿಂದೆ ಟಿಪ್ಪು ಸುಲ್ತಾನ್ ಭಾವಚಿತ್ರ ಅಳವಡಿಸಲಾಗಿತ್ತು. ಟಿಪ್ಪು ಸುಲ್ತಾನ್ ಫೋಟೋ ನೋಡುತ್ತಿದ್ದಂತೆ ವಾಹನ ತಡೆದ ಪ್ರಸನ್ನಕುಮಾರ್, ಎಸ್. ಟಿ. ವೀರೇಶ್, ಕೆ. ಎಂ. ವೀರೇಶ್ ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರು ಇದು ಕನ್ನಡ ದ್ರೋಹಿ ಕೆಲಸ ಎಂದು ಆರೋಪಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್ ಸಾಬ್ ಅವರು ಆಗಿರುವ ಅಚಾತುರ್ಯ ಸರಿಪಡಿಸಲಾಗುವುದು. ಮೆರವಣಿಗೆ ಸಾಗಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಹನವನ್ನು ವಾಪಸ್ ಕಳುಹಿಸಲಾಯಿತು.

ಟಿಪ್ಪು ಸುಲ್ತಾನ್ ಕನ್ನಡಕ್ಕಾಗಿ ಎಂದಿಗೂ ಹೋರಾಟ ಮಾಡಿಲ್ಲ. ತನ್ನ ಆಡಳಿತಾವಧಿಯಲ್ಲಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದ. ಈತ ಕನ್ನಡ ದ್ರೋಹಿ. ಆದ್ರೂ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಈ ಸ್ತಬ್ಧಚಿತ್ರ ಇರುವ ಔಚಿತ್ಯವಾದರೂ ಏನಿತ್ತು? ಪಾಲಿಕೆಯ ಕನ್ನಡ ದ್ರೋಹಿ ಮನಸ್ಥಿತಿ ತೋರಿಸುತ್ತಿದೆ ಎಂದು ಮಾಜಿ ಮೇಯರ್ ಎಸ್. ಟಿ. ವೀರೇಶ್ ಆರೋಪಿಸಿದರು.

ಕನ್ನಡ ನಾಡು, ನುಡಿ, ಭಾಷೆ, ಇತಿಹಾಸ, ಭವ್ಯ ಪರಂಪರೆ ಹೊಂದಿದೆ. ಆದ್ರೆ, ಕನ್ನಡ ದ್ರೋಹಿಯನ್ನು ಕರ್ನಾಟಕ ರಾಜ್ಯೋತ್ಸವದ ವೇಳೆ ವೈಭವೀಕರಿಸಲು ಮುಂದಾಗಿದ್ದು ಖಂಡನೀಯ. ಕನ್ನಡ ಪರ ಸಂಘಟನೆಗಳ ಸದಸ್ಯರೂ ಸಹ ಇಂಥದ್ದೊಂದು ಟ್ಯಾಬ್ಲೋ ಇದ್ದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲ ಸೇರಿದಂತೆ ಕನ್ನಡಕ್ಕಾಗಿ ಹೋರಾಟ ಮಾಡಿದ ಮಹನೀಯರು ಇರಬೇಕಾದ ಜಾಗದಲ್ಲಿ ಕನ್ನಡ ದ್ರೋಹಿ ಕೂರಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ತರುವಂತೆ ಸಲಹೆ ಕೊಟ್ಟವರ್ಯಾರು? ಅಧಿಕಾರಿಗಳು ಯಾಕೆ ಮೌನ ವಹಿಸಿದ್ದರು? ಇದು ಮೆರವಣಿಗೆಯವರೆಗೆ ಬರುತ್ತದೆ ಎಂದರೆ ಆಡಳಿತ ಪಕ್ಷದ ಸಹಕಾರ ಇಲ್ಲದೇ ಸಾಧ್ಯವಾಗುತ್ತದೆಯಾ
ಎಂದು ಪ್ರಶ್ನಿಸಿದರು.

ಕನ್ನಡ ರಾಜ್ಯೋತ್ಸವ ಎಲ್ಲೆಡೆ ಆಚರಿಸಲಾಗುತ್ತಿದೆ. ಕನ್ನಡಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ನೀಡುವುದಕ್ಕಿಂತ ಹೆಚ್ಚಾಗಿ ಕನ್ನಡ ವಿರೋಧಿ ಧೋರಣೆ ಹೊಂದಿದ್ದೇ ಹೆಚ್ಚು. ಟಿಪ್ಪು ಜಯಂತಿ ಆಚರಣೆ, ಹಬ್ಬದ ವೇಳೆ ಔರಂಗಜೇಬ್, ಟಿಪ್ಪು ಸುಲ್ತಾನ್ ಭಾವಚಿತ್ರ, ಕಟೌಟ್ ಅಳವಡಿಸಿದ್ದಕ್ಕೆ ಆಗಿರುವ ಅನಾಹುತಗಳ ನಮ್ಮ ಕಣ್ಮುಂದೆ ಇದೆ. ಶಾಂತಿಪ್ರಿಯ ದಾವಣಗೆರೆಯಲ್ಲಿ ವಿನಾಕಾರಣ ಗೊಂದಲ ಹುಟ್ಟುಹಾಕುವಂತ ಕೆಲಸ ಮಾಡಿದ್ದು ಸರಿಯಲ್ಲ ಎಂದು ದೂರಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment