SUDDIKSHANA KANNADA NEWS/ DAVANAGERE/ DATE:10-02-2024
ದಾವಣಗೆರೆ: ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಮೀಸಲಾತಿ ಹೆಚ್ಚಳಕ್ಕೆ ಜನಸಂಖ್ಯೆಗನುಗುಣವಾಗಿ ಶೀಫಾರಸು ಮಾಡಿದ ವರದಿಯನ್ವಯ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪ.ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು ಇದರಿಂದ ಲಭ್ಯವಾಗುವ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಹರಿಹರ ತಾಲ್ಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಆಯೋಜಿಸಲಾದ ಶ್ರೀಮಠದ 26 ನೇ ವಾರ್ಷಿಕೋತ್ಸವ ಮತ್ತು ಪುಣ್ಯಾನಂದ ಸ್ವಾಮೀಜಿಯವರ 17 ನೇ ಪುಣ್ಯಸ್ಮರಣೆ, ಪ್ರಸನ್ನಾನಂದ ಸ್ವಾಮೀಜಿಯವರ 16 ನೇ ಪಟ್ಟಾಧಿಕಾರ ಮಹೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೀಸಲಾತಿ ಜನಸಂಖ್ಯೆಗನುಗುಣವಾಗಿ ಹೆಚ್ಚಳವಾಗಬೇಕು, ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಾಲುಸಿಗಬೇಕೆಂಬುದರಲ್ಲಿ ಬದ್ದತೆ ಇದೆ. ಮೀಸಲಾತಿ ಜನರ ಹಕ್ಕು, ಇದು ಭಿಕ್ಷೆಯಲ್ಲ, ಬರಿ ಭಾಷಣದಿಂದ ಸಮಾನತೆ ಬರುವುದಿಲ್ಲ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ರಾಜ್ಯದಲ್ಲಿನ ಸೂಕ್ತವಾದ ವಿಶ್ವವಿದ್ಯಾನಿಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ತೀರ್ಮಾನ
ಮಾಡಲಾಗುತ್ತದೆ. 2013 ರಲ್ಲಿ ಪರಿಶಿಷ್ಟರ ಕಾನೂನು ಜಾರಿಗೆ ತಂದಿದ್ದರಿಂದ ಅನುದಾನದಲ್ಲಿ ಇವರಿಗಾಗಿ ಶೇ 24.1 ರಷ್ಟು ಅನುದಾನವನ್ನು ಮೀಸಲಿರಿಸಿ ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಕಾಯಿದೆ ಜಾರಿಗೆ ತಂದು ಅನುದಾನ ಮೀಸಲಿರಿಸಿ ಇವರ ಅಭಿವೃದ್ದಿಗೆ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಚಾಮರಾಜನಗರ, ಹಾಸನ, ಮೈಸೂರು, ಮಡಿಕೇರಿ, ಮಂಡ್ಯ ಜಿಲ್ಲೆಯಲ್ಲಿನ ಪರಿವಾರ ಮತ್ತು ತಳವಾರ ಜನರು ಕೇಂದ್ರ ಸರ್ಕಾರದಲ್ಲಿ ಎಸ್.ಟಿ.ಗೆ ಸೇರಿದ್ದಾರೆ. ಆದರೆ ರಾಜ್ಯದ ಮೀಸಲಾತಿಯಲ್ಲಿ ವರ್ಗ-1 ರಲ್ಲಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿ ರಾಜ್ಯದಲ್ಲಿನ ಎಲ್ಲಾ ಪರಿವಾರ, ತಳವಾರ ಜನರನ್ನು ಎಸ್.ಟಿ.ಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಮತ್ತು ಪರಿಶಿಷ್ಟ ಪಂಗಡದವರ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಮಾಯಣ, ಮಹಾಭಾರತ, ವಚನ ಸಾಹಿತ್ಯ ಇವು ವರ್ಗ ರಹಿತ, ಜಾತಿ ರಹಿತವಾದ ಸಮಾಜ ರಾಮರಾಜ್ಯ ಅಂದಿನ ಕಾಲದಲ್ಲಿಯೇ ಇತ್ತು. ನಾವೆಲ್ಲರೂ ಮನುಷ್ಯರು ನಮ್ಮಲ್ಲಿ ಭೇದಭಾವ ಬರಬಾರದು, ಪರಸ್ಪರ
ಪ್ರೀತಿಯಿಂದ ಬದುಕಬೇಕು. ಧರ್ಮ ನಮಗೋಸ್ಕರ ಇರುವುದು, ಧರ್ಮಕ್ಕೋಸ್ಕರ ಇರುವುದಿಲ್ಲ. ಅಸಮಾನತೆ, ಭಿನ್ನ ಭಾವಗಳಿರಬಾರದು. ಪಟ್ಟಭದ್ರ ಹಿತಾಸಕ್ತಿ ಜಾತಿಯನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟುವ ಕೆಲಸವಾಗಬಾರದು. ಮಹಾಕಾವ್ಯಗಳು, ವಚನಗಳು ಹೇಳಿದಂತೆ ಸಂವಿಧಾನವು ಸಹ ಅದೇ ಆಶಯಗಳನ್ನು ಹೊಂದಿದೆ. ಸಂವಿಧಾನದ ಎಲ್ಲಾ ಧ್ಯೇಯೋದ್ದೇಶಗಳನ್ನು ಜಾರಿಗೆ ತರುವುದೇ ಸರ್ಕಾರದ ಉದ್ದೇಶವಾಗಿದೆ.
ಎಲ್ಲ ಜನರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾದ ಶಕ್ತಿ ಬಂದಾಗ ಸಮಸಮಾಜದ ನಿರ್ಮಾಣ ಸಾಧ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಹೊರತುಪಡಿಸಿದರೆ, ಇನ್ನುಳಿದವರು ವರ್ಣಶ್ರಮ ಸಂಸ್ಕೃತಿಯಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ವಿದ್ಯೆ ಯಾರ ಸ್ವತ್ತಲ್ಲ, ವಿದ್ಯೆ ಕಲಿತು ಬುದ್ದಿವಂತಿಕೆ ಹಾಗೂ ಸ್ವಾಭಿಮಾನದಿಂದ ಮನುಷ್ಯರಾಗಿ ಎಲ್ಲರಂತೆ ಸಮಾನರಾಗಿ ಬದುಕಬೇಕು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದರು.
ಲೋಕೋಪಯೋಗಿ ಸಚಿವರಾದ ಸತೀಶ್ ಲ.ಜಾರಕಿಹೊಳಿ ಮಾತನಾಡಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಕ್ಕು ಮತ್ತು ಸರ್ಕಾರದ ಸೌಲಭ್ಯ ಪಡೆಯಲು ಯಶಸ್ವಿಯಾದರೂ ಇನ್ನೂ ಅನೇಕ ಬೇಡಿಕೆಗಳಿವೆ. ಪರಿಶಿಷ್ಟರು
ಉದ್ಯಮ ಸ್ಥಾಪನೆ ಮಾಡಲು ಬೆಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಭೂಮಿ ನೀಡಬೇಕು. ಕೆ. ಎಸ್. ಎಫ್. ಸಿ. ಯಿಂದ ಆರ್ಥಿಕ ಶಕ್ತಿ ತುಂಬ ಬೇಕು, ಶೋಷಿತ ಸಮುದಾಯಗಳ ಮಠಕ್ಕೆ ಬೆಂಗಳೂರು ಸಮೀಪ ಭೂಮಿಯನ್ನು ನೀಡುವ ಮೂಲಕ ಈ ಜನರ ಅಭಿವೃದ್ದಿಗೆ ಸಹಕಾರಿಯಾಗಬೇಕೆಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ ವಾಲ್ಮೀಕಿ ಸಮುದಾಯ ದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯವಾಗಿದೆ. ರಾಜ್ಯ ಮತ್ತು ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಪಂಜಾಬ್ ವಾಲ್ಮೀಕಿ
ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆ ಇದೆ. ಆದರೂ ಸಹ ಈ ಸಮುದಾಯ ಹಿಂದಿದೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಈ ಹಿಂದೆ ಸಚಿವನಾದಾಗ ಮೀಸಲಾತಿ ಹೆಚ್ಚಳಕ್ಕೆ ಪ್ರತಿಭಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸಿ ಹೆಚ್ಚಳದ ಭರವಸೆ ನೀಡಿದ್ದೆ ಎಂದು ವಿವರಿಸಿದರು.
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ವಾಲ್ಮೀಕಿ ರಾಮಾಯಣ ಶ್ರೇಷ್ಟ ಗ್ರಂಥವಾಗಿದ್ದು ವಾಲ್ಮೀಕಿ ಮಹಾನ್ ಸಂತನಾಗಿದ್ದಾನೆ. ರಾಮ, ರಹೀಮರ ಧರ್ಮ, ಜಾತಿ ಬೇರೆಯಾದರೂ ನಾವೆಲ್ಲರೂ ಮಾನವರಾಗಿದ್ದೇವೆ. ವಾಲ್ಮೀಕಿ ಸಮುದಾಯ ಎಲ್ಲರೊಂದಿಗೆ ಸಹಭಾಳ್ವೆಯನ್ನು ಮಾಡುವಂತಹ ಸಮಾಜವಾಗಿದೆ ಎಂದು ತಿಳಿಸಿದರು.
ಸಹಕಾರ ಸಚಿವ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್ ರಾಜಣ್ಣ ರಾಮರಾಜ್ಯದ ಕಲ್ಪನೆಯನ್ನು ಸಾಕಾರ ಮಾಡಲು ಸರ್ಕಾರ ಬದ್ದವಾಗಿದೆ. ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಅಭಿವೃದ್ದಿ
ಬೇಕಾಗಿದೆ. ಸರ್ಕಾರದಲ್ಲಿ ಮೂರು ಜನ ಮಂತ್ರಿಗಳಿದ್ದು ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದು ವಿವರಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಜನ ಸೇವಾ, ಕ್ರೀಡಾ ಇಲಾಖೆ ಸಚಿವರಾದ ಬಿ.ನಾಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಹಾಗೂ ಹರಿಹರದ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಬಸವಂತಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು
ಹಾಗೂ ಶಾಸಕರಾದ ಟಿ.ರಘುಮೂರ್ತಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸವನಗೌಡ ತುರುವಿನಾಳ್, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಜೆ.ಎನ್.ಗಣೇಶ್, ಡಾ; ಎನ್. ಟಿ. ಶ್ರೀನಿವಾಸ್, ಬಸವನಗೌಡ ದದ್ದಲ್ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು. ಆಂಧ್ರದ ಕೇಂದ್ರೀಯ ಬುಡಕಟ್ಟು ವಿ.ವಿ.ಕುಲಪತಿ ನಾಡೋಜ ಪ್ರೊ.ತೇಜಸ್ವಿ ಕಟ್ಟಿಮನಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಮತ್ತು ಸಾಹಿತಿಗಳಾದ ಡಾ; ಬಿ.ಎಲ್.ವೇಣುರವರಿಗೆ ಮದಕರಿನಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.