ಬೆಂಗಳೂರು: ಕರ್ನಾಟಕದ ಸರ್ಕಾರಿ ಕಾರ್ಯಕ್ರಮಗಳು ಮತ್ತು ಅಧಿಕೃತ ಸಮಾರಂಭಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನುಮಾತ್ರ ಹಾಡಲು ಅಥವಾ ನುಡಿಸಲು ರಾಜ್ಯ ಸರ್ಕಾರ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಶಿಷ್ಟಾಚಾರ ಹಾಗೂ ಸಮಾನತೆಯನ್ನು ಕಾಯ್ದುಕೊಳ್ಳಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಪೂರ್ಣಪ್ರಮಾಣದಲ್ಲಿ ಹಾಡಬೇಕು ಎಂದು ಮಾರ್ಗದರ್ಶಿ ಸೂತ್ರಗಳನ್ನು ನೀಡಿತ್ತು. ಆದರೆ, ಕೇಂದ್ರದ ಈ ಮಾರ್ಗದರ್ಶನಕ್ಕೆ ಪ್ರತಿಯಾಗಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು 1937ರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (CWC) ಕೈಗೊಂಡಿದ್ದ ಐತಿಹಾಸಿಕ ನಿರ್ಣಯಕ್ಕೆ ಬದ್ಧವಾಗಿ ಈ ಆದೇಶವನ್ನು ಜಾರಿಗೆ ತಂದಿದೆ.
1937ರ ಐತಿಹಾಸಿಕ ನಿರ್ಧಾರ ಮತ್ತು ಹಿನ್ನೆಲೆ:
1882ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ ‘ಆನಂದಮಠ’ ಕಾದಂಬರಿಯ ವಂದೇ ಮಾತರಂ ಗೀತೆಯನ್ನು 1896ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಪ್ರಥಮ ಬಾರಿಗೆ ಗಾನ ಮಾಡಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಗೀತೆ ದೇಶಭಕ್ತಿಯ ಸಂಕೇತವಾಗಿ ಹೊರಹೊಮ್ಮಿತ್ತು. ಆದರೆ, ಗೀತೆಯ ನಂತರದ ಚರಣಗಳಲ್ಲಿ ಕೆಲವು ನಿರ್ದಿಷ್ಟ ಧಾರ್ಮಿಕ ಮತ್ತು ಪೂಜಾ ಉಲ್ಲೇಖಗಳಿರುವುದರಿಂದ, ಸರ್ವಧರ್ಮ ಸಮಭಾವ ಮತ್ತು ಸರ್ವ ಜನಾಂಗದ ಶಾಂತಿಯ ತೋಟದ ತತ್ವಕ್ಕೆ ಅನುಗುಣವಾಗಿ 1937ರಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಪಸ್ಥಿತಿಯಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿತ್ತು.
ರಾಜಕೀಯ ಸಂಘರ್ಷ:
ಈ ಆದೇಶವು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು “ತುಷ್ಟೀಕರಣ ರಾಜಕೀಯ” ಎಂದು ಟೀಕಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು, ಗಾಂಧೀಜಿ ಹಾಗೂ ನೆಹರೂ ಅವರ ಕಾಲದಿಂದಲೂ ಬಂದಿರುವ ಜಾತ್ಯತೀತ ಪರಂಪರೆಯನ್ನು ಹಾಗೂ ದೇಶದ ವೈವಿಧ್ಯತೆಯನ್ನು ಗೌರವಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.





Leave a comment