ಗುವಾಹಾಟಿ (ಅಸ್ಸಾಂ): ಅಸ್ಸಾಂನ ಸೋನಾಪುರದಲ್ಲಿರುವ ಪ್ರತಿಷ್ಠಿತ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯ ಬಿ.ಪಿ.ಎಡ್ ಮೂರನೇ ವರ್ಷದ ವಿದ್ಯಾರ್ಥಿನಿ ಶ್ರುತಿ ಉಪಾಧ್ಯಾಯ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕಾಲೇಜು ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಪ್ರಕರಣದ ವಿವರ:
ಶ್ರುತಿ ಉಪಾಧ್ಯಾಯ ತೀವ್ರ ಬೆನ್ನು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ಕ್ಯಾಂಪಸ್‌ನ ವೈದ್ಯರು ಸರಿಯಾದ ಪರೀಕ್ಷೆ ನಡೆಸದೆ ಕೇವಲ ‘ಪೇನ್‌ಕಿಲ್ಲರ್’ (ನೋವು ನಿವಾರಕ) ಮಾತ್ರೆಗಳನ್ನು ಮಾತ್ರ ನೀಡುತ್ತಿದ್ದರು ಎಂದು ಶ್ರುತಿಯ ರೂಮ್‌ಮೇಟ್ ಶ್ವೇತಾ ಹಾಗೂ ಸಹಪಾಠಿಗಳು ಆರೋಪಿಸಿದ್ದಾರೆ. ನೋವು ನಿವಾರಕಗಳನ್ನು ಸತತವಾಗಿ ನೀಡಿದರೂ ಆಕೆಯ ಆರೋಗ್ಯ ಪರಿಸ್ಥಿತಿ ಕ್ಷೀಣಿಸುತ್ತಾ ಹೋಯಿತು. ನಂತರ ಪರೀಕ್ಷಿಸಿದಾಗ ಆಕೆಯ ಅಪೆಂಡಿಕ್ಸ್ ಫಟಿಸಿರುವುದು ಬೆಳಕಿಗೆ ಬಂದಿದೆ.
ಸೋನಾಪುರ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲು ತಡಮಾಡಲಾಯಿತು ಮತ್ತು ಕುಟುಂಬದವರಿಗೂ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ಶ್ರುತಿಯ ತಾಯಿ ಕಣ್ಣೀರಿಟ್ಟಿದ್ದಾರೆ. ಗುವಾಹಾಟಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 8ರಂದು ಶ್ರುತಿ ಕೊನೆಯುಸಿರೆಳೆದಿದ್ದಾಳೆ.
ವಿದ್ಯಾರ್ಥಿಗಳಿಂದ ತೀವ್ರ ಪ್ರತಿಭಟನೆ:
ಘಟನೆಯಿಂದ ಆಕ್ರೋಶಗೊಂಡ LNIPE ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಘಟನೆಯ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಪ್ರತಿಭಟನೆಯ ಬಿಸಿಗೆ ಮಣಿದ ಆಡಳಿತ ಮಂಡಳಿಯು ಚೀಫ್ ವಾರ್ಡನ್ ಮೆರ್ಲಿನ್ ಗೊಗೊಯ್ ಅವರನ್ನು ಅಮಾನತುಗೊಳಿಸಿದ್ದು, ವೈದ್ಯರ ವಿರುದ್ಧ ತನಿಖೆಗೆ ಆದೇಶಿಸಿದೆ.





Leave a comment