SUDDIKSHANA KANNADA NEWS/ DAVANAGERE/ DATE:10-12-2024
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊಸದಾಗಿ ಘೋಷಣೆ ನಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಶ್ರೇಯೋಭಿವೃದ್ಧಿಗೆ ಕಾರಣಕರ್ತರಾಗಿದ್ದರು ಎಂದು ತಮ್ಮ ಸಂತಾಪ ಸೂಚಕದಲ್ಲಿ ಸ್ಮರಿಸಿದ್ದಾರೆ.
ಕೃಷ್ಣ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ – ಎಲ್ಲಾ ನಾಲ್ಕು ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಶಾಮನೂರು ಶಿವಶಂಕರಪ್ಪನವರು ಸ್ಮರಿಸಿದ್ದಾರೆ.
ಕೃಷ್ಣ ಅವರಿಗೆ ಯಾರ ಮೇಲೂ ದ್ವೇಷ ಇರಲಿಲ್ಲ ಮತ್ತು ಅವರು ನಿರ್ವಹಿಸಿದ ಕಚೇರಿಗೆ ಯಾವಾಗಲೂ ಘನತೆಯನ್ನು ತರುತ್ತಿದ್ದರು. ಅವರ ಜೀವನ ಯುವ ರಾಜಕಾರಣಿಗಳಿಗೆ ಒಂದು ಸಂದೇಶವಾಗಿದೆ. ನಮಗೆ ಉತ್ತಮ ರಾಜಕಾರಣಿಗಳು ಸಿಗಬಹುದು, ಆದರೆ ಅವರಂತಹ ಅತ್ಯುತ್ತಮ ರಾಜಕಾರಣಿ ಸಿಗುವುದು ಕಷ್ಟ ಎಂದಿದ್ದಾರೆ.
ಎಸ್.ಎಂ.ಕೃಷ್ಣ ಅವರು ಸಜ್ಜನ ರಾಜಕಾರಣಿ ಮತ್ತು ದೂರದೃಷ್ಟಿಯುಳ್ಳವರು.ನಾನು ಉಪ ಚುನಾವಣೆ ನಂತರ 1999ರಲ್ಲಿ ಗೆಲುವು ಸಾಧಿಸಿದ ವೇಳೆ ನನಗೆ ಸಚಿವ ಸ್ಥಾನ ನೀಡಿ ನನ್ನ ಸಾಧನೆಗೆ ಮುನ್ನುಡಿ ಬರೆದರು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ಮರಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಸುಮಾರು 15 ಸಾವಿರ ಆಶ್ರಯಮನೆಗಳು, ಟೆನ್ನಿಸ್ ಕ್ರೀಡಾಂಗಣ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ನನಗೆ ಹೆಚ್ಚಿನ ರಾಜಕೀಯ ಶಕ್ತಿ ತುಂಬಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಅವರುಗಳು ಪ್ರಾರ್ಥಿಸಿದ್ದಾರೆ.