SUDDIKSHANA KANNADA NEWS/ DAVANAGERE/ DATE:04-06-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ಬೇಕು ಎಂದು ಜಿಲ್ಲೆಯ ಜನತೆ ಬಯಸಿದ್ದರು. ಅದರಂತೆಯೇ ಫಲಿತಾಂಶ ಬಂದಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಶಾಸಕರು ಒಟ್ಟಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಿಕ್ಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆಲ್ಲಲು ಈ ಬಾರಿ ಸಾಕಷ್ಟು ಕಾರಣಗಳಿವೆ. ನಮಗೆ ಮತದಾರರು ಒಳ್ಳೆಯ ಬಹುಮಾನ ನೀಡಿದ್ದಾರೆ. ಮೊದಲಿನಿಂದಲೂ ಲೋಕಸಭೆ ಚುನಾವಣೆ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುತಿತ್ತು. ಬಿಜೆಪಿಯಿಂದ ಸಂಸದರಾಗಿದ್ದ ಜಿ. ಎಂ. ಸಿದ್ದೇಶ್ವರ ಅವರು ಒಮ್ಮೆ ತಂದೆ ಸಿಂಪಥಿ, ಮತ್ತೊಂದು ಬಾರಿ ಗುರುಗಳ ಆಶೀರ್ವಾದ, ಇನ್ನೆರಡು ಬಾರಿ ನರೇಂದ್ರ ಮೋದಿ ಅವರ ಅಲೆಯಿಂದ ಗೆದ್ದಿದ್ದರು. ಆದ್ರೆ, ಈ ಬಾರಿ ದಾವಣಗೆರೆಯಲ್ಲಿ ಕಾಂಗ್ರೆಸ್ ಪರ ಅಲೆ ಇತ್ತು ಎಂದು ತಿಳಿಸಿದರು.
ಗೆಲುವಿನ ಅಂತರ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಅಂತಿಮವಾಗಿ ಗೆಲುವು ಗೆಲುವೇ. ಜನತೆ ಲೋಕಸಭೆಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಳುಹಿಸಿದರೆ ಒಳ್ಳೆಯ ಕೆಲಸ ಆಗುತ್ತದೆ ಎಂಬ ಕಾರಣಕ್ಕೆ ಆರಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತೇವೆ ಎಂದು ಹೇಳಿದರು.
ಎಲ್ಲಾ ವರ್ಗದವರೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಶಾಸಕರು, ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ, ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಸೇರಿದಂತೆ ಎಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಮತದಾರರ ಮನವೊಲಿಸಿ ಪಕ್ಷಕ್ಕೆ ಮತ ಹಾಕಿಸಿದ್ದಾರೆ. ಎಲ್ಲರ ಆಶೀರ್ವಾದದಿಂದ ಜಯಭೇರಿ ಬಾರಿಸಿದ್ದು. ಮತದಾರ ಬಂಧುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಲ್ಲಾ ಮಾಧ್ಯಮಗಳು ತೋರಿಸಿದ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ನಿಜವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದೇ ಬೇರೆ, ಫಲಿತಾಂಶ ಬಂದಿದ್ದೇ ಬೇರೆ. ದಾವಣಗೆರೆಯಲ್ಲಿಯೂ ಕಾಂಗ್ರೆಸ್ ಸೋಲುತ್ತದೆ ಎಂದು ತೋರಿಸಿದ್ದೀರಾ. ಆದ್ರೆ, ಇಂದು ಗೆದ್ದಿದೆ ಅಲ್ವಾ. ರಾಜ್ಯದಲ್ಲಿ ಇನ್ನೂ ನಾಲ್ಕೈದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು. ಆದ್ರೆ, ಸ್ವಲ್ಪ ವ್ಯತ್ಯಾಸ ಆಗಿದೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.