ದಾವಣಗೆರೆ/ಬೆಂಗಳೂರು: ತಮ್ಮ ಕಷ್ಟ-ಸುಖಗಳನ್ನು ತೋಡಿಕೊಳ್ಳಲು ಬಂದ ಅನ್ನದಾತರ ಮುಂದೆ ಹರಿಹರದ ಶಾಸಕ ಬಿ.ಪಿ. ಹರೀಶ್ ಹಾಗೂ ರೈತರ ವಿರುದ್ಧ ಗಂಭೀರ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಡೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್: ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಜಲಾಶಯದಿಂದ ನೀರು ಬಿಡುವಂತೆ ಮನವಿ ಮಾಡಲು ತೆರಳಿದ್ದ ಹರಿಹರ ಭಾಗದ ರೈತರ ಮುಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಿಂದನೀಯ ಮಾತುಗಳನ್ನಾಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಸರ್ಕಾರದ ವಿರುದ್ಧ ಹರಿದಾಯ್ದಿರುವ ಆರ್: ಅಶೋಕ್, “ಸಚಿವರೇ, ಇದು ಪ್ರಜಾಪ್ರಭುತ್ವದ ಆಡಳಿತವೋ ಅಥವಾ ಪಾಳೇಗಾರಿಕೆಯ ಮನೋಭಾವವೋ?” ಎಂದು ಪ್ರಶ್ನಿಸಿದ್ದಾರೆ.
ಇಡೀ ಕುಟುಂಬವೇ ಅಧಿಕಾರದ ಕೇಂದ್ರವಾಗಿರುವುದರಿಂದ ಸಚಿವರಿಗೆ ಅಧಿಕಾರದ ಮದ ತಲೆಗೇರಿದೆ ಎಂದು ಕಿಡಿಕಾರಿರುವ ವಿಪಕ್ಷ ನಾಯಕರು, ಜನರಿಂದ ಆಯ್ಕೆಯಾದ ಶಾಸಕರನ್ನೇ ಇಷ್ಟು ನಿರ್ಲಕ್ಷ್ಯ ಹಾಗೂ ನಿಂದನೆಯಿಂದ ಕಾಣುವ ಸಚಿವರಿಗೆ ಸಾಮಾನ್ಯ ರೈತರ ಸಂಕಷ್ಟದ ಬಗ್ಗೆ ಇನ್ನೆಷ್ಟು ಕಾಳಜಿ ಇರಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅಧಿಕಾರ ಶಾಶ್ವತವಲ್ಲ, ಪ್ರಜಾಪ್ರಭುತ್ವದಲ್ಲಿ ಪಾಳೇಗಾರಿಕೆ ಪ್ರವೃತ್ತಿಗೆ ಜಾಗವಿಲ್ಲ. ರೈತರು ಹಾಗೂ ಹರಿಹರದ ಜನತೆಯನ್ನು ಅವಮಾನಿಸಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಕ್ಷಣವೇ ಬೇಷರತ್ ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳು ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆರ್: ಅಶೋಕ್ ಒತ್ತಾಯಿಸಿದ್ದಾರೆ.





Leave a comment