ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಒಕ್ಕೂಟದ ಹೆಸರು ಮತ್ತೆ ಭಾರಿ ಸಂಚಲನ ಮೂಡಿಸುತ್ತಿದೆ.
ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಮತ್ತು ಎಚ್.ಸಿ. ಮಹದೇವಪ್ಪ ಅವರಂತಹ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ನಡೆದ ಇತ್ತೀಚಿನ ಅಹಿಂದ ಸಮಾವೇಶವು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಹೊಸ ಚರ್ಚೆಗಳಿಗೆ ಹಾದಿಮಾಡಿಕೊಟ್ಟಿದೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಮುನ್ನೆಲೆಗೆ ತಂದಿರುವುದು 2028ರ ಮುಂದಿನ ರಾಜಕೀಯ ನಾಯಕತ್ವದ ಲೆಕ್ಕಾಚಾರದ ಹೊಸ ದಾಳವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಪರಮೇಶ್ವರ್ ಮುನ್ನೆಲೆಗೆ ಬಂದಿದ್ದೇಕೆ?
2013ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುವ ಅವಕಾಶವಿತ್ತು. ಆದರೆ ಕ್ಷೇತ್ರ ಬದಲಾವಣೆ ಮತ್ತು ಸೋಲಿನಿಂದಾಗಿ ಆ ಅವಕಾಶ ತಪ್ಪಿತ್ತು.
ಇದೀಗ, ನಾಯಕತ್ವ ಬದಲಾವಣೆ ಅಥವಾ ‘ದಲಿತ ಸಿಎಂ’ ಕೂಗು ಗಟ್ಟಿಯಾದರೆ, ತಮ್ಮದೇ ಸೈದ್ಧಾಂತಿಕ ಚೌಕಟ್ಟಿಗೆ ಬೆಂಬಲವಾಗಿರುವ ಪರಮೇಶ್ವರ್ ಅವರನ್ನು ಮುಂದೆ ತರುವುದು ಸಿದ್ದರಾಮಯ್ಯ ಬಣದ ರಾಜಕೀಯ ತಂತ್ರಗಾರಿಕೆ ಎನ್ನಲಾಗುತ್ತಿದೆ.
ಅಹಿಂದ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ:
ಸಚಿವ ಸತೀಶ್ ಜಾರಕಿಹೊಳಿ ಅವರು “ಅಹಿಂದ ಎಂಬುದು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ” ಎಂದು ನೀಡಿರುವ ಹೇಳಿಕೆ ಅತ್ಯಂತ ಮಹತ್ವದ್ದು. ಸಮುದಾಯದ ನಾಯಕತ್ವವು ಒಬ್ಬ ವ್ಯಕ್ತಿಯ ಸುತ್ತ ತಿರುಗುವ ಬದಲು ಸಿದ್ಧಾಂತದ ಸುತ್ತ ಸಂಘಟಿತವಾಗಬೇಕು ಎಂಬ ಧ್ವನಿ ಈಗ ಪಕ್ಷದ ಒಳಗಿನಿಂದಲೇ ಕೇಳಿಬರುತ್ತಿದೆ.
ಮತಬ್ಯಾಂಕ್ ಮತ್ತು ಕಾಂಗ್ರೆಸ್‌ನ ನಿಜವಾದ ಸವಾಲು:
ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಕಡಿಮೆಯಾದರೆ ಕಾಂಗ್ರೆಸ್‌ನ ಮುಸ್ಲಿಂ ಮತ್ತು ದಲಿತ ಮತಗಳು ಬೇರೆಡೆ ಹೋಗುತ್ತವೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ದಲಿತ ಮತ್ತು ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಬೆಂಬಲಿಸುತ್ತಾ ಬಂದಿದ್ದಾರೆ.
ಆದರೆ ಕುರುಬ ಸಮುದಾಯದ ಮತಗಳಲ್ಲಿ ಸಿದ್ದರಾಮಯ್ಯ ಅವರ ವೈಯಕ್ತಿಕ ಪ್ರಭಾವ ಹೆಚ್ಚಿದೆ. ಹೀಗಾಗಿ ಒಬ್ಬ ನಾಯಕನನ್ನಷ್ಟೇ ನೆಚ್ಚಿಕೊಳ್ಳದೆ, ಹೊಸ ಪರ್ಯಾಯ ನಾಯಕತ್ವವನ್ನು ಬೆಳೆಸುವುದು ಕಾಂಗ್ರೆಸ್‌ಗೆ ಅತ್ಯಗತ್ಯವಾಗಿದೆ.





Leave a comment