ಕಾನ್ಪುರ: ಕೋಟಿ ಕೋಟಿ ಆಸ್ತಿಯೊಡತಿ, ಸದಾ ಪಾರ್ಟಿ, ಪಬ್ ಎನ್ನುತ್ತಿದ್ದ ಸೊಸೆಯೊಬ್ಬಳು ತನ್ನ ಕೋಟ್ಯಧಿಪತಿ ಮಾವನನ್ನೇ ಕೊಲೆ ಮಾಡಿಸಿದ ರೋಚಕ ಹಾಗೂ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಖ್ಯಾತ ಔಷಧ ಉದ್ಯಮಿ ವಿನೀತ್ ಮಿಚೋನಾ (63) ಕೊಲೆಯಾದ ದುರಂತ ನಾಯಕ. ಇವರ ಸೊಸೆ ಶಾಲು ಮಿಚೋನಾ (36) ಈ ಭೀಕರ ಕೊಲೆಯ ರೂವಾರಿ.
ಘಟನೆಯ ಹಿನ್ನೆಲೆ ಹಾಗೂ ಕೊಲೆಗೆ ಕಾರಣ:
ಮನೆಯಲ್ಲಿ ಮಾವ ವಿನೀತ್ ಮಿಚೋನಾ ಅವರು ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಿ, ಸೊಸೆಯ ಪ್ರತಿಯೊಂದು ಚಟುವಟಿಕೆ ಮೇಲೆಯೂ ಕಣ್ಣಿಟ್ಟಿದ್ದರು. ಲೇಟ್ ನೈಟ್ ಪಾರ್ಟಿಗಳಿಗೆ ಹೋಗುವುದು ಹಾಗೂ ತಡವಾಗಿ ಮನೆಗೆ ಬರುವುದಕ್ಕೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ, ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ ಸಣ್ಣಪುಟ್ಟ ವೆಚ್ಚಗಳಿಗೂ ಮಾವನ ಬಳಿಯೇ ಹಣ ಕೇಳಬೇಕಾದ ಪರಿಸ್ಥಿತಿ ಇತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಶಾಲು, ಮಾವನನ್ನು ಮುಗಿಸಲು ಸಂಚು ರೂಪಿಸಿದ್ದಳು.
ಪಾರ್ಟಿಯಲ್ಲಿ ಡ್ಯಾನ್ಸ್, ಫೋನ್‌ನಲ್ಲಿ ಕೊಲೆ ಮಾರ್ಗದರ್ಶನ:
ಜುಲೈ 28 ರಂದು ತಡವಾಗಿ ಬಂದಾಗ ಮಾವ ಹಾಗೂ ಸೊಸೆ ನಡುವೆ ತೀವ್ರ ಜಗಳವಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಶಾಲು, ಮನೆಯ ಮಾಜಿ ಕೆಲಸಗಾರ ವಿಶಾಲ್ ಹಾಗೂ ಆತನ ಸ್ನೇಹಿತ ರಾಜ ಕಿಶೋರ್‌ಗೆ ₹6 ಲಕ್ಷ ಸುಪಾರಿ ನೀಡಿದ್ದಳು. ಶನಿವಾರ ರಾತ್ರಿ ‘ಕಾಸ್ಮೋಗಿನ್ ಲೌಂಜ್’ ಪಬ್‌ನಲ್ಲಿ ಪತಿ ಹಾಗೂ ಮಗನೊಂದಿಗೆ ಪಾರ್ಟಿ ಮಾಡುತ್ತಿದ್ದ ಶಾಲು, ಬಾಲಿವುಡ್ ಹಾಡುಗಳಿಗೆ ಕುಣಿಯುತ್ತಲೇ ಹಂತಕರಿಗೆ ಫೋನ್ ಕರೆ ಮೂಲಕ ಕೊಲೆ ಮಾಡಲು ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತಿದ್ದಳು.
ಮನೆಯ ಮುಖ್ಯ ಬಾಗಿಲಿನ ನಕಲಿ ಕೀ ಹಾಗೂ ಔಷಧ ನೀಡಲು ಬಂದಿದ್ದಾರೆಂದು ಸೆಕ್ಯುರಿಟಿ ಗಾರ್ಡ್‌ಗೆ ಸುಳ್ಳು ಹೇಳಿ ಹಂತಕರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಸಾಕ್ಷಿ ಸಿಗದಂತೆ ಉಸಿರುಗಟ್ಟಿಸಿ ಕೊಲ್ಲಲು ಸಂಚು ರೂಪಿಸಲಾಗಿತ್ತಾದರೂ, ಗೊಂದಲದಲ್ಲಿ ಉದ್ಯಮಿ ವಿನೀತ್‌ಗೆ 26 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಯಿತು.
ಪೊಲೀಸ್ ಕಾರ್ಯಾಚರಣೆ ಹಾಗೂ ಬಂಧನ:
ಘಟನೆ ಬಳಿಕ ಮನೆಗೆ ಬಂದ ಶಾಲು, ಏನೂ ತಿಳಿಯದವಳಂತೆ ನಾಟಕವಾಡಿದ್ದಳು. ಆದರೆ, ಸಿಸಿಟಿವಿ ಫೂಟೇಜ್ ಹಾಗೂ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಎನ್‌ಕೌಂಟರ್ ಬಳಿಕ ವಿಶಾಲ್ ಹಾಗೂ ರಾಜ ಕಿಶೋರ್‌ನನ್ನು ಬಂಧಿಸಿದರು. ಹಂತಕರ ತಪ್ಪೊಪ್ಪಿಗೆಯಿಂದಾಗಿ ಮಹಾನಾಟಕಿ ಸೊಸೆ ಶಾಲು ಮಿಚೋನಾಳ ಅಸಲಿ ಮುಖ ಬಯಲಾಗಿ, ಆಕೆಯನ್ನೂ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.





Leave a comment