SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಎರಡೂವರೆ ದಶಕಗಳ ಬಳಿಕ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ವೀರಭದ್ರಸ್ವಾಮಿ ಮಟಿಕಲ್ ಅವರು, 108 ತೆಂಗಿನಕಾಯಿ ಒಡೆಯುವ ಮೂಲಕ ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ವೀರಭದ್ರಸ್ವಾಮಿ ಮಟಿಕಲ್ ಅವರು, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಅಹಂಕಾರ, ಧಿಮಾಕು, ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರೋಸಿ ಹೋಗಿದ್ದರು. ಪಕ್ಷಕ್ಕಾಗಿ ದುಡಿದವರೆಲ್ಲರೂ ಕಾಂಗ್ರೆಸ್ ಸೇರಿದ್ದೇ ಸಾಕ್ಷಿ. ಈ ಬಾರಿಯ ಚುನಾವಣೆಯಲ್ಲಿ ವಿದ್ಯಾವಂತೆಯಾಗಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರನ್ನು ಗೆಲ್ಲಿಸಲು ನಾವೆಲ್ಲರೂ ಪಣ ತೊಟ್ಟಿದ್ದೆವು. ಅವರ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಇಂದು ಹರಕೆ ತೀರಿಸಿದ್ದೇನೆ ಎಂದು ತಿಳಿಸಿದರು.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ ಕಳೆದ ಏಪ್ರಿಲ್ 30ರಂದು ನಗರದ ಹಳೇಪೇಟೆಯ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟು ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುಗ್ಗಳದೊಂದಿಗೆ ದೀಡು ನಮಸ್ಕಾರ ಸೇವೆಯನ್ನು ವೀರಭದ್ರಸ್ವಾಮಿಗೆ ಸಲ್ಲಿಸಿದ್ದೆ. ಬಳಿಕ ಬಾಯಿಗೆ ಶಸ್ತ್ರ, ನಾಲಗೆಗೆ 108 ಶಿವದಾರ ಧರಿಸಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೆ. ಈ ಹಿಂದೆ ಬಿಜೆಪಿ ಗೆಲ್ಲಲೆಂದು ಪ್ರಾರ್ಥಿಸಿ ನಾನೇ ಹರಕೆ ಹೊತ್ತು ತೀರಿಸಿದ್ದೆ. ಆದ್ರೆ, ಸಿದ್ದೇಶ್ವರರ ದುರಾಡಳಿತಕ್ಕೆ ಬೇಸತ್ತು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿ ಸೋಲಲು ಸಿದ್ದೇಶ್ವರರೇ ಕಾರಣ ಎಂದು ಹೇಳಿದರು.
ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ನಾನು ಹರಕೆ ಹೊತ್ತಿದ್ದೆ. ಸ್ವಾಮಿ ಹಾಗೂ ಜಿಲ್ಲೆಯ ಮತದಾರರ ಆಶೀರ್ವಾದದಿಂದ ಪ್ರಭಾ ಮಲ್ಲಿಕಾರ್ಜುನ್ ಅವರು ಜಯ ಗಳಿಸಿದ್ದಾರೆ. ಇನ್ನು ಮುಂದಾದರೂ ಸಿದ್ದೇಶ್ವರ ಅವರು ತಪ್ಪು ಸರಿಪಡಿಸಿಕೊಳ್ಳಲಿ.
ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಗೌರವ ನೀಡುವುದನ್ನು ಮಾಡಬೇಕು ಎಂದು ವೀರಭದ್ರಸ್ವಾಮಿ ಮಟಿಕಲ್ ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಹಿಂದುತ್ವದ ಪರ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನಂತೆ ಸಾವಿರಾರು ಜನರು ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದರು. ಅವರೆಲ್ಲರನ್ನೂ ತಿರಸ್ಕಾರ ಮನೋಭಾವದಿಂದ ನೋಡಿದ ಕಾರಣ ಸಿದ್ದೇಶ್ವರ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಅವರು ಸೋಲು ಕಾಣಬೇಕಾಯಿತು. ಇದು ಸಿದ್ದೇಶ್ವರರ ಕುಟುಂಬದ ಸೋಲು ಅಷ್ಟೇ. ಬಿಜೆಪಿಯ ಸೋಲಲ್ಲ ಎಂದು ತಿಳಿಸಿದರು.
ಹರಕೆ ತೀರಿಸುವ ವೇಳೆ ಕಾಂಗ್ರೆಸ್ ಮುಖಂಡರಾದ ಕಕ್ಕರಗೊಳ್ಳ ಕಲ್ಲಿಂಗಪ್ಪ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರವಿಕುಮಾರ್, ಶಶಿ ಶೇಖರ್, ಅಣಜಿ ಬಸವರಾಜ್, ಕರೂರು ಗಣೇಶ್,ಡಿ. ಕೆ. ರಾಜೇಂದ್ರ, ಸಿರಿಗೆರೆ ಬಸವರಾಜ್, ಅಣಜಿ ಪ್ರಶಾಂತ್, ಕಾಯಿಪೇಟೆ ಹಾಲೇಶಣ್ಣ, ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.