SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ಜಿಲ್ಲಾ ಪೊಲೀಸ್ ಮತ್ತು ಹಸಿರು ದಳ ಸಂಸ್ಥೆ ದಾವಣಗೆರೆ ಸಹಯೋಗದಲ್ಲಿ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಘನತ್ಯಜ್ಯ ನಿರ್ವಹಣೆ ಮತ್ತು ಋತುಚಕ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಎಸ್ಪಿ ಉಮಾ ಪ್ರಶಾಂತ್ ಪ್ರಶಾಂತ್ ಅವರು, ಕಾರ್ಯಾಗಾರ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಉಮಾ ಪ್ರಶಾಂತ್ ಅವರು, ಮಹಿಳೆಯರಿಗೆ ನೈಸರ್ಗಿಕ ಕ್ರಿಯೆಗಳಲ್ಲಿ ಒಂದಾದ ಮುಟ್ಟಿನ ವಿಷಯದಲ್ಲಿ ಮುಕ್ತವಾಗಿ ಚರ್ಚಿಸುವುದು ಅದರ ಬಗ್ಗೆ ಜ್ಞಾನವನ್ನು ತಿಳಿದುಕೊಳ್ಳುವಲ್ಲಿ ಇಂದಿಗೂ ಸಹ ಮುಜುಗರ ಪಟ್ಟುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲಿಸ್ ಸಿಬ್ಬಂದಿಗೆ ಮುಟ್ಟಿನ ನೈರ್ಮಲ್ಯ ಮತ್ತು ಋತುಚಕ್ರ ನಿರ್ವಹಣೆ ಬಗ್ಗೆ ಅರಿವು ತುಂಬಾ ಅವಶ್ಯಕ. ಈ ಹಿನ್ನೆಲೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಒಮ್ಮೆ ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್ ಗಳು ಹಾನಿಕರವಾಗಿದ್ದು ತೆರೆದ ಜಾಗಗಳಲ್ಲಿ ಇವುಗಳನ್ನು ಹಾಕುವುದರಿಂದ ಇವುಗಳು ಕೊಳೆಯದೇ ಹಾಗೇ ಉಳಿದು ಸೋಂಕುಗಳನ್ನು ಮತ್ತು ಖಾಯಿಲೆಗಳನ್ನು ಹರಡಿ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಈ ಸ್ಯಾನಿಟರಿ ಪ್ಯಾಡ್ ಗಳನ್ನು ಸಂಸ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಬಹಳ ಕಷ್ಟಕರಾಗಿರುವುದರಿಂದ ಇವುಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಸಿರುದಳ ಸಂಸ್ಥೆಯು ಮುಟ್ಟಿನ ನೈರ್ಮಲ್ಯ ಮತ್ತು ಮರುಬಳಕೆಯ ಮುಟ್ಟಿನ ಆಯ್ಕೆಗಳ ತರಬೇತಿಗಳನ್ನು ನಗರ ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ನೀಡುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಇಂದು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುಗುರಿ ಕಾರ್ಯಕ್ರಮದ ತರಬೇತುದಾರರಾದ ಶ್ರೀದೇವಿ, ದಾವಣಗೆರೆ ಜಿಲ್ಲೆಯ ಹಸಿರುದಳ ಸಂಸ್ಥೆಯ ಕಾರ್ಯಾಕ್ರಮ ವ್ಯವಸ್ಥಾಪಕ ಗುರುರಾಜ್ ಹೆಚ್.ಎ ರವರು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನುರಿತ ಸ್ತ್ರೀರೋಗ ತಜ್ಞೆ ಡಾ. ಮೀನಾಕ್ಷಿ ಬೆಂಗಳೂರು ವೈದ್ಯರು ವರ್ಚುವಲ್ ಮೀಟಿಂಗ್ ಮೂಲಕ ಮುಟ್ಟಿನ ವೇಳೆ ಬಳಸುವ ಮರುಬಳಕೆಯ ವಸ್ತುಗಳ ಆಯ್ಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕೆಲಸದ ಸಮಯದಲ್ಲಿ ಮಹಿಳಾ ಸಿಬ್ಬಂದಿ ಅನುಭವಿಸುವ ಮುಜುಗರವನ್ನು ಹೋಗಲಾಡಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಹಿಳಾ ಆರೋಗ್ಯ ಕಾಳಜಿವಹಿಸಿ ಹಮ್ಮಿಕೊಂಡಿದ್ದ ಕಾರ್ಯಾಗಾರದ ಬಗ್ಗೆ ಹಾಗೂ ಕಾರ್ಯಾಗಾರವನ್ನು ನಡೆಸಿಕೊಟ್ಟ ಹಸಿರು ದಳ ಸಂಸ್ಥೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲಾ ಪೊಲೀಸ್ ಕಛೇರಿಯ ಮಹಿಳಾ ಅಧಿಕಾರಿ ಸಿಬ್ಬಂದಿ ಹಸಿರುದಳದ ನೂರ್ ಜಾಹಾನ್, ಮೈಸೂರಿನ ಚೈತ್ರ ಹಾಜರಿದ್ದರು.