ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಮೇ 10 ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿನ ಹೊರವಲಯದ ಕಾಗಲಿಪುರ ಸಮೀಪವಿರುವ ಆಶ್ರಮವೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅವರ ಆಗಮನಕ್ಕೂ ಮುನ್ನ ಜರುಗಿದ ಭದ್ರತಾ ತಪಾಸಣೆ ಹಾಗೂ ಸ್ಯಾನಿಟೈಸೇಶನ್ ಕಾರ್ಯಾಚರಣೆಯ ಸಂದರ್ಭದಲ್ಲಿ, ಮುಖ್ಯ ವೇದಿಕೆಯಿಂದ ಸುಮಾರು 3 ಕಿಲೋಮೀಟರ್ ದೂರದ ಫುಟ್ಪಾತ್ ಬದಿಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳು (ಸ್ಫೋಟಕ ವಸ್ತುಗಳು) ಪತ್ತೆಯಾಗಿದ್ದವು.
ಈ ಗಂಭೀರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ಮುಗಿಯುವವರೆಗೆ ಆರು ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಸಂಚು ಇದಾಗಿದೆಯೇ ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.
ರಾಜಕೀಯ ಕೆಸರೆರಚಾಟ:
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ದೇಶದ ಪ್ರಧಾನಿಯವರ ಭದ್ರತೆಯಲ್ಲಿ ಇಂತಹ ಕ್ಷಮಿಸಲಾರದ ಲೋಪ ಎಸಗಿರುವುದು ಗಂಭೀರವಾದದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ.





Leave a comment