SUDDIKSHANA KANNADA NEWS/ DAVANAGERE/ DATE:14-01-2024
ದಾವಣಗೆರೆ: ಅಡಿಕೆ ದುಡ್ಡು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪ ಶುದ್ಧ ಸುಳ್ಳು. ನಮ್ಮ ಕುಟುಂಬಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಹವಾಲಾ ಹಣ ವರ್ಗಾವಣೆ ಮಾಡಿಲ್ಲ. ಜ. 16ರಂದು ಕಾಂಗ್ರೆಸ್ಸಿಗರು ಐಟಿ, ಇಡಿ ದಾಳಿಗೆ ವಹಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಬಂದಿದೆ. ನನ್ನ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ, ನಿಂದನೆ, ಪ್ರತಿಭಟನೆ ನಡೆಸಿದರೆ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದರು.
ಜಿಎಂಐಟಿ ವಸತಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಛಿಯಲ್ಲಿ ಮಾತನಾಡಿದ ಅವರು, ಯಾವುದೇ ಆಧಾರವಿಲ್ಲದೇ ಆರೋಪ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಏನೆೇ ಆರೋಪ ಮಾಡುವುದಿದ್ದರೂ, ಪ್ರತಿಭಟನೆ ನಡೆಸುವುದಿದ್ದರೂ ಸಾಕ್ಷಿ ಸಮೇತ ನಡೆಸಲಿ. ಯಾರೋ ಆರೋಪ ಮಾಡಿದಾಕ್ಷಣ ತೇಜೋವಧೆಗೆ ಪ್ರಯತ್ನಿಸಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಗುಡುಗಿದರು.
ನನಗೆ ಏನು ಬೇಕಾದರೂ ಮಾಡಲು ಜನರಿದ್ದಾರೆ. ಸುಳ್ಳು ಆರೋಪ ಮಾಡಲಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ರೀತಿಯ ಆಪಾದನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ವಾಟ್ಸಪ್, ಫೇಸ್ ಬುಕ್ ಜಾಲತಾಣಗಳಲ್ಲಿ ಜ. 16ರಂದು ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ನೇತೃತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯಿಂದ ಪ್ರತಿಭಟನೆ ನಡೆಸುವುದಾಗಿ ಹಾಕಿರುವುದು ಗಮನಕ್ಕೆ ಬಂದಿದೆ. ಸಿದ್ದೇಶ್ವರ ವಿರುದ್ಧ ಐಟಿ, ಇಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿರುವುದು ತಿಳಿದು ಬಂದಿದೆ ಎಂದರು.
ಪ್ರತಿಭಟನೆ ನಡೆಸಿ, ನಿಂದನೆ, ಆಕ್ಷೇಪಾರ್ಹ ಪದ ಬಳಕೆ, ವಿನಾ ಕಾರಣ ಆರೋಪ ಮಾಡಿದರೆ ನ್ಯಾಯಾಲಯದಲ್ಲಿ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದು ಖಚಿತ ಎಂದು ಹೇಳಿದರು.
2024ರ ಜನವರಿ 7ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಭೀಮನಸಮುದ್ರದ ಉಮೇಶ್ ಹಾಗೂ ಮಲ್ಲಿಕಾರ್ಜುನ್ ಎಂಬುವವರು ದೂರು ಕೊಟ್ಟಿದ್ದರು. ಆರೋಪಿ ಸ್ವಾಮಿ ಹಾಗೂ ಅನುಪಮಾ ಎಂಬಾಕೆಯಿಂದ 93 ಲಕ್ಷ ರೂ. ನಗದು, ಬಂಗಾರ, ಮೊಬೈಲ್ ಸೇರಿದಂತೆ ಸುಮಾರು 97 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಒಂದು ಕೋಟಿ ರೂಪಾಯಿ ಪ್ರಕರಣದಲ್ಲಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಸಿದ್ದೇಶ್ವರ ತಿಳಿಸಿದರು.
ಅನುಪಮಾ ಎಂಬಾಕೆ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸ್ವಾಮಿ ಎಂಬಾತ ಟ್ಯಾಕ್ಸಿ ಡ್ರೈವರ್. ನಮ್ಮದು ಯಾವುದೇ ಹವಾಲಾ ದುಡ್ಡು ಇಲ್ಲ. ಗುಟ್ಕಾ ಹವಾಲಾ ದುಡ್ಡು ಸಾಗಾಟ ಮಾಡಿಲ್ಲ. ಚಾಲಕ ಸ್ವಾಮಿ ಎಂಬಾತ ಸಿಕ್ಕ ಒಂದೂವರೆ ಕೋಟಿ ರೂಪಾಯಿ ಹಣ ಪ್ರಸನ್ನಕುಮಾರ್ ಹಾಗೂ ಸಿದ್ದೇಶ್ವರ ಅವರಿಗೆ ಸೇರಿದ್ದು, ಅವರೇ ಹೊಣೆ ಎಂಬ ಆರೋಪ ಮಾಡಿದ್ದಾನೆ. ನಮ್ಮ ಸಂಸ್ಥೆ, ಅಣ್ಣ, ತಮ್ಮಂದಿರು ಸೇರಿದಂತೆ ಯಾರೂ ಇಲ್ಲ. ವರ್ಷಕ್ಕೆ 50 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ಹೇಳಿದರು.