SUDDIKSHANA KANNADA NEWS/ DAVANAGERE/ DATE:19-02-2025
ಬೆಂಗಳೂರು: ಮೂಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮ ಪತ್ನಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೊಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್’ ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಕುಟುಕಿದ್ದಾರೆ.
ಒಂದೇ ಒಂದು ದಿನ ನೆಪಮಾತ್ರಕ್ಕೆ ಆರೋಪಿ ಸಿಎಂ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಿರಿವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ’. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ‘ನ್ಯಾಯ’ ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡಿ ‘ನ್ಯಾಯದ ಸಮಾಧಿ’ ಮಾಡಿದೆ ಈ ದುಷ್ಟ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಕೋರ್ಟಿಗೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿ ಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ, ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು ಎಂದು ಭವಿಷ್ಯ ನುಡಿದಿದ್ದಾರೆ.