SUDDIKSHANA KANNADA NEWS/ DAVANAGERE/ DATE:18-02-2024
ಮಂಡ್ಯ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮಂಗಳೂರಿನಲ್ಲಿ ಇದಕ್ಕೆ ಚಾಲನೆಯನ್ನೂ ನೀಡಲಾಗಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗೆ ಕಸರತ್ತು ಆರಂಭಿಸಿದ್ದಾರೆ. ನಾನಾ ತಂತ್ರಗಾರಿಕೆ ಮೂಲಕ ಟಿಕೆಟ್ ಪಡೆಯಲು ವರಿಷ್ಟರ ಮೇಲೆ ಒತ್ತಡ ಹೇರತೊಡಗಿದ್ದಾರೆ. ಈ ಮಧ್ಯೆ ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವ ಮಾನದಂಡದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಅವರು ಇಂದು ಮಂಡ್ಯ ತಾಲೂಕಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು ಈ ಬಾರಿ ಕನಿಷ್ಠ ಇಪ್ಪತ್ತು ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಅವರಿಗೆ ಜನ ಈ ಬಾರಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಸ್ಥಳೀಯ ಮುಖಂಡರು ಸೂಚಿಸಿದವರಿಗೆ ಟಿಕೆಟ್
ಸ್ಥಳೀಯವಾಗಿ ಶಾಸಕರು, ಜಿಲ್ಲಾ ಬ್ಲಾಕ್ ಸಮಿತಿ ಅಧ್ಯಕ್ಷರು, ಮುಖಂಡರು ಯಾರನ್ನು ಸೂಚಿಸುತ್ತಾರೋ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದರು.
ಸಿಎಂ ಆದ ನಂತರ ಮಳವಳ್ಳಿಗೆ ಪ್ರಥಮ ಭೇಟಿ
ಮುಖ್ಯಮಂತ್ರಿಯಾದ ನಂತರ ಮಳವಳ್ಳಿಗೆ ಮೊದಲ ಬಾರಿ ಆಗಮಿಸುತ್ತಿದ್ದು, ಇಲ್ಲಿ ಸಮರ್ಥವಾದ ಮುಖಂಡರು ಮತ್ತು ಶಾಸಕರಿರುವುದರಿಂದ ಪದೇ ಪದೇ ಬರಬೇಕಾದ ಅಗತ್ಯವಿಲ್ಲ. ಜಿಲ್ಲಾ ಮಂತ್ರಿಗಳೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.