ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇರು ನಟ ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ ಮತದಾರ ದೇವರು. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದು ತಿಳಿಸಿದರು.
ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ ಎಂದು ಹೇಳಿದರು.
ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ ಎಂದು ಹೇಳಿದರು.
ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
- Governor of Karnataka
- Griha Office Krishna
- Karnataka CM Resigns
- Karnataka Latest News
- Karnataka Political Updates
- Outgoing CM Siddaramaiah
- Siddaramaiah Press Meet
- Siddaramaiah Resignation
- Siddaramaiah Resignation Speech
- Siddaramaiah resigns
- ಕರ್ನಾಟಕ ಮುಖ್ಯಮಂತ್ರಿ ರಾಜೀನಾಮೆ
- ಕರ್ನಾಟಕ ರಾಜಕೀಯ ವಿದ್ಯಾಮಾನ
- ಗೃಹ ಕಚೇರಿ ಕೃಷ್ಣಾ
- ನಿರ್ಗಮಿತ ಸಿಎಂ ಸಿದ್ದರಾಮಯ್ಯ
- ಮತದಾರ ದೇವರು
- ಸಂವಿಧಾನ
- ಸಿದ್ದರಾಮಯ್ಯ ಭಾಷಣ
- ಸಿದ್ದರಾಮಯ್ಯ ರಾಜೀನಾಮೆ
- ಸಿದ್ದರಾಮಯ್ಯ ರಾಜೀನಾಮೆ ಪತ್ರ
- ಸಿದ್ದರಾಮಯ್ಯ ಸುದ್ದಿಗೋಷ್ಠಿ





Leave a comment