ವರುಣಾ: ನಾನು 2023ರ ಮೇ 23ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, 2026ರ ಮೇ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ರಾಹುಲ್ ಗಾಂಧಿಯವರು ಯಾವಾಗ ಹೇಳುತ್ತಾರೋ ಆಗ ಮುಖ್ಯಮಂತ್ರಿ ಸ್ಥಾನವನ್ನು ಬಿಡುತ್ತೇನೆ ಎಂದು ನಾನು ಹಿಂದೆಯೇ ಹಲವು ಬಾರಿ ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವರುಣಾ ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ರಾಜಕೀಯ ಬದುಕಿನ ಬಹುದೊಡ್ಡ ಶಕ್ತಿ. ನಿಮ್ಮ ಬೆಂಬಲದಿಂದಲೇ ನಾನು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿ ನಿರ್ವಹಿಸುವ ಅವಕಾಶ ಪಡೆದೆ. ನನ್ನ ರಾಜಕೀಯ ಬದುಕಿನಲ್ಲಿ ನಾನು ಏನಾದರೂ ಸಾಧಿಸಿದ್ದರೆ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೆ ಅದರ ಹಿಂದೆ ನಿಮ್ಮ ಆಶೀರ್ವಾದವಿದೆ ಎಂದು ತಿಳಿಸಿದರು.
ವರುಣಾ ಕ್ಷೇತ್ರದಲ್ಲಿ ₹183.64 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ದೊರೆತಿದೆ. ಇದರಲ್ಲಿ ₹40 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಲಾಗಿದ್ದು, ಸುಮಾರು ₹143 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ವರುಣಾ ಕ್ಷೇತ್ರ ರಚನೆಯಾದ ನಂತರ 2008ರಿಂದ ನಾಲ್ಕು ಚುನಾವಣೆಗಳು ನಡೆದಿವೆ. ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಗೆಲ್ಲಿಸಿದ್ದೀರಿ. 2018ರಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದೀರಿ. ನಿಮ್ಮ ಈ ನಿರಂತರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಋಣಿ ಎಂದು ಹೇಳಿದರು.
ನನ್ನ ರಾಜಕೀಯ ಬದುಕಿನುದ್ದಕ್ಕೂ ನುಡಿದಂತೆ ನಡೆಯಬೇಕು, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇನೆ. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಇದರ ಜೊತೆಗೆ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನೂ ಒಂದೇ ವರ್ಷದೊಳಗೆ ಜಾರಿಗೆ ತಂದೆವು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ರಾಜ್ಯದ ಬಡವರು, ಮಹಿಳೆಯರು, ಯುವಜನರು ಹಾಗೂ ದುಡಿಯುವ ವರ್ಗಗಳ ಬದುಕಿಗೆ ಆರ್ಥಿಕ ಬಲ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯ ಇಂದು ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. 240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತವಾಗಿವೆ. ಕಳೆದ 126 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾದ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಕೈಗೆ ಹಣ, ಆಹಾರ ಮತ್ತು ಅಗತ್ಯ ನೆರವು ತಲುಪಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿವೆ ಎಂದು
ತಿಳಿಸಿದರು.
2013ರಿಂದ 2018ರವರೆಗೆ ಹಾಗೂ 2023ರಿಂದ 2026ರ ಮೇ 26ರವರೆಗೆ ಒಟ್ಟಾರೆ ಎಂಟು ವರ್ಷಕ್ಕೂ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆಯಿತು. ಅಧಿಕಾರ ಶಾಶ್ವತವಲ್ಲ, ಆದರೆ ಜನರೊಂದಿಗೆ ಇರುವ ಸಂಬಂಧ ಮತ್ತು ಜನಸೇವೆ ಶಾಶ್ವತ ಎಂದರು.
- Dasanur Development Works
- DK Shivakumar CM
- Karnataka Guarantee Schemes
- Karnataka Politics Updates.
- Siddaramaiah
- Siddaramaiah News
- Siddaramaiah Varuna Speech
- Varuna constituency
- Varuna News Kannada
- Yathindra Siddaramaiah
- ಕರ್ನಾಟಕ ಬರ ಪರಿಸ್ಥಿತಿ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಸರ್ಕಾರ
- ಗ್ಯಾರಂಟಿ ಯೋಜನೆಗಳು
- ಡಿ. ಕೆ. ಶಿವಕುಮಾರ್
- ದಾಸನೂರು ಅಭಿವೃದ್ಧಿ ಕಾಮಗಾರಿ
- ಯತೀಂದ್ರ ಸಿದ್ದರಾಮಯ್ಯ
- ವರುಣಾ ಕ್ಷೇತ್ರ
- ವರುಣಾ ಸುದ್ದಿ
- ಸಿದ್ದರಾಮಯ್ಯ





Leave a comment