Home ಕ್ರೈಂ ನ್ಯೂಸ್ ಸಾಮಾಜಿಕ ಜಾಲತಾಣದ ಪರಿಚಯ ದುರಂತ ಅಂತ್ಯ: ಹೋಟೆಲ್‌ನಲ್ಲಿ ವಿವಾಹಿತೆ ಹಾಗೂ ಪ್ರಿಯಕರ ಆತ್ಮಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಸಾಮಾಜಿಕ ಜಾಲತಾಣದ ಪರಿಚಯ ದುರಂತ ಅಂತ್ಯ: ಹೋಟೆಲ್‌ನಲ್ಲಿ ವಿವಾಹಿತೆ ಹಾಗೂ ಪ್ರಿಯಕರ ಆತ್ಮಹತ್ಯೆ!

Share
ವಿವಾಹಿತೆ
Share

ಬಹ್ರೈಚ್ (ಉತ್ತರ ಪ್ರದೇಶ): ಸಾಮಾಜಿಕ ಜಾಲತಾಣದ ಮೂಲಕ ಶುರುವಾದ ಪರಿಚಯ ಪ್ರೇಮಕ್ಕೆ ತಿರುಗಿ, ಕೊನೆಗೆ ಹೋಟೆಲ್ ಕೊಠಡಿಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಹ್ರೈಚ್ ನಗರದಲ್ಲಿ ಬೆಳಕಿಗೆ ಬಂದಿದೆ. ನೋಯ್ಡಾ ಮೂಲದ 46 ವರ್ಷದ ವಿವಾಹಿತೆ ಹಾಗೂ ಶ್ರಾವಸ್ತಿ ಮೂಲದ 27 ವರ್ಷದ ಯುವಕ ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಗೌತಮ್ ಬುದ್ಧ ನಗರದ (ನೋಯ್ಡಾ) ನಿವಾಸಿ ಪಿಂಕಿ (46) ಹಾಗೂ ಶ್ರಾವಸ್ತಿ ಜಿಲ್ಲೆಯ ನಿವಾಸಿ ರಿಂಕು (27) ಎಂದು ಗುರುತಿಸಲಾಗಿದೆ. ಇವರಿಬ್ಬರಿಗೂ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ, ಕಾಲಕ್ರಮೇಣ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಕೆಲ ದಿನಗಳ ಹಿಂದೆ ರಿಂಕು, ಪಿಂಕಿಯನ್ನು ನೋಯ್ಡಾದಿಂದ ಕರೆತಂದಿದ್ದು, ಸೆಪ್ಟೆಂಬರ್ 22 ರಂದು ಬಹ್ರೈಚ್‌ನ ನಗರ ಕೊತ್ವಾಲಿ ವ್ಯಾಪ್ತಿಯ ‘ಅವಧ್ ಕೈಲಾಶ್’ ಹೋಟೆಲ್‌ನಲ್ಲಿ ದಂಪತಿ ಎಂದು ಹೇಳಿಕೊಂಡು ಕೊಠಡಿ ನಂಬರ್ 201 ಅನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

ಇತ್ತ ಮಹಿಳೆ ಕಾಣೆಯಾದ ಹಿನ್ನೆಲೆಯಲ್ಲಿ, ರಿಂಕು ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಪಿಂಕಿ ಕುಟುಂಬಸ್ಥರು ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೋಟೆಲ್ ಕೊಠಡಿಯಲ್ಲಿ ಕಾದಿತ್ತು ಆಘಾತ:

ಹೋಟೆಲ್ ಸಿಬ್ಬಂದಿಯ ಪ್ರಕಾರ, ಇಬ್ಬರೂ ಕಳೆದ 9 ದಿನಗಳಿಂದ ಸಾಮಾನ್ಯ ಗ್ರಾಹಕರಂತೆ ಇದ್ದು, ನಿತ್ಯ ಉಪಹಾರ ಮತ್ತು ಊಟವನ್ನು ಕೊಠಡಿಗೆ ತರಿಸಿಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಗಿನ ಉಪಹಾರದ ನಂತರ ಕೊಠಡಿಯಿಂದ ಯಾವುದೇ ಸದ್ದು ಅಥವಾ ಚಲನವಲನ ಕಂಡುಬರಲಿಲ್ಲ. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳಾ ಸಿಬ್ಬಂದಿಯ ಸಮ್ಮುಖದಲ್ಲಿ ಹಾಗೂ ವೀಡಿಯೋಗ್ರಫಿ ಜತೆಗೆ ಕೊಠಡಿಯ ಬಾಗಿಲು ತೆರೆದು ನೋಡಿದಾಗ, ಇಬ್ಬರೂ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಎಫ್‌ಎಸ್‌ಎಲ್ ತನಿಖೆ ಚುರುಕು:

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ (FSL) ತಜ್ಞರ ತಂಡ ಭೇಟಿ ನೀಡಿ ಮಾದರಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಎನ್.ಡಿ. ಮಿಶ್ರಾ ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತರ ಮೊಬೈಲ್ ಕರೆ ವಿವರಗಳು ಹಾಗೂ ಕುಟುಂಬಸ್ಥರ ಹೇಳಿಕೆಗಳನ್ನು ಆಧರಿಸಿ ಮುಂದಿನ ತನಿಖೆ ಕಾಯ್ದುಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles