SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಹಾಗೂ ಕಲ್ಲು ತೂರಾಟ ನಡೆಸಿದವರ ವಿರುದ್ಧದ ಕೇಸ್ ಕೈಬಿಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಮುಸ್ಲಿಂ ತುಷ್ಟೀಕರಣದ ಪರಮಾವಧಿ ಎಂದು ಬಿಜೆಪಿ ಯುವ ಮುಖಂಡ ಶಿವನಗೌಡ ಟಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಮೂಲಕ ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣದ ಗಮನ ಬೇರೆಡೆ ಸೆಳೆಯುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕುತಂತ್ರ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಹೋರಾಟ ಮಾಡಿ ರಾಜ್ಯದ ಜನತೆಗೆ ವಾಸ್ತವಾಂಶ ತಿಳಿಸುತ್ತಿದೆ. ಇಂಥ ಹೊತ್ತಿನಲ್ಲಿ ಜನರ ಗಮನ ಬೇರೆಡೆ ಹೋಗಬೇಕೆಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ಮೇಲಿದ್ದ ಮೊಕದ್ದಮೆಗಳನ್ನು ಹಿಂಪಡೆದಿದ್ದರಿಂದಲೇ ಕಳೆದ ವರ್ಷ ಶಿವಮೊಗ್ಗದಲ್ಲಿ ಗಲಭೆಯಾಗಲು ಕಾರಣವಾಗಿತ್ತು. ಇದಕ್ಕೆ ಕಾಂಗ್ರೆಸ್ ಸರ್ಕಾರವು ಒಂದು ಕೋಮಿನ ಬಗ್ಗೆ ಹೊಂದಿರುವ ಮೃದು ಧೋರಣೆ ಕಾರಣ. ಕೋಮುಗಲಭೆ, ವಿಧ್ವಂಸಕ ಕೃತ್ಯ ಎಸಗುವವರ ಪರ ಕಾಂಗ್ರೆಸ್ ಸರ್ಕಾರ ಇದೆ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಶಿವನಗೌಡ ಟಿ. ಪಾಟೀಲ್ ಹೇಳಿದ್ದಾರೆ.