ದಾವಣಗೆರೆ: ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ತಂದೆ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ. ಹೈಕಮಾಂಡ್ ಮುಂದೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂಬ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯರ ವಿರುದ್ಧ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಬುಸುಗುಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯರು ಪದೇ ಪದೇ ಇಂಥ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಕಡಿವಾಣ ಹಾಕಬೇಕು. ನಾವೆಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದರು.
ಡಿಕೆಶಿ ಪರಮಾಪ್ತ ಶಿವಗಂಗಾ ಬಸವರಾಜ್:
ಡಿ. ಕೆ. ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮತ್ತು ಆರಾಧ್ಯ ದೈವ ಎಂದು ಹೇಳಿಕೊಂಡು ಹೋಗುವ ಶಿವಗಂಗಾ ಬಸವರಾಜ್ ಶಾಸಕರಾಗಿ ಡಿ. ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಚುನಾವಣೆಗೆ ಮುನ್ನ
ಹಾಗೂ ಶಾಸಕರಾದ ಬಳಿಕ ಡಿ. ಕೆ. ಶಿವಕುಮಾರ್ ಅವರ ಪರವಾಗಿ ನಿಂತವರೇ. ಮೊದಲಿನಿಂದಲೂ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಬೇಡಿಕೆ ಇಟ್ಟವರು. ಬಹಿರಂಗವಾಗಿಯೇ ಈ ಹಿಂದೆ ಹೇಳಿಕೆ ನೀಡಿದ್ದರು. ಹೈಕಮಾಂಡ್ ನೊಟೀಸ್ ನೀಡಿದ್ದರೂ ತಲೆಕೆಡಿಸಿಕೊಳ್ಳದೇ ಡಿ. ಕೆ. ಶಿವಕುಮಾರ್ ಪರವೇ ಹೇಳಿಕೆ ನೀಡುತ್ತಿದ್ದವರು. ಈಗ ಮತ್ತೆ ಯತೀಂದ್ರ ಸಿದ್ದರಾಮಯ್ಯರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಇಂಥ ಹೇಳಿಕೆ ಮತ್ತೆ ಮತ್ತೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಡಿಕೆಶಿಗೆ ಪ್ರಾಣ ಕೊಡ್ತೇನೆ:
ಡಿ. ಕೆ. ಶಿವಕುಮಾರ್ ಅವರು ಏನು ಹೇಳಿದರೂ ಮಾಡಲು ತಯಾರಿದ್ದೇವೆ. ಪ್ರಾಣ ಕೇಳಿದರೂ ನೀಡಲು ಸಿದ್ಧರಿದ್ದೇವೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮಾತಿನಂತೆ ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು. 139 ಶಾಸಕ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಲ್ಲಿ ಡಿ. ಕೆ. ಶಿವಕುಮಾರ್ ಅವರ ಶ್ರಮ ಅಪಾರ. ಈ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು. ಈಗಾಗಲೇ
ಅಧಿಕಾರ ಅನುಭವಿಸಿದ್ದಾರೆ. ಯುವಕರಿಗೆ ಮನ್ನಣೆ ಮತ್ತು ಪಕ್ಷ ಸಂಘಟನೆಯಲ್ಲಿ ನಿಸ್ಸೀಮರಾಗಿರುವ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕೆಂಬುದು ನಮ್ಮ ಮೊದಲಿನಿಂದಲೂ ಬೇಡಿಕೆಯಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನಿರ್ಧರಿಸುತ್ತಾರೆ:
ಯತೀಂದ್ರ ಸಿದ್ದರಾಮಯ್ಯರ ಇಂಥ ಮಾತುಗಳ ಬಗ್ಗೆ ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಗಮನ ಹರಿಸಬೇಕು. ನಾವೆಲ್ಲರೂ ಹೈಕಮಾಂಡ್ ಸೂಚನೆ ಮೇರೆಗೆ ಸುಮ್ಮನಿದ್ದೇವೆ. ಆದರೆ ಯತೀಂದ್ರ ಸಿದ್ದರಾಮಯ್ಯ ಅವರು ಮಾತ್ರ ಪದೇ ಪದೇ ಸಿದ್ದರಾಮಯ್ಯರೇ ಐದು ವರ್ಷ ಸಿಎಂ ಆಗಿ ಪೂರೈಸುತ್ತಾರೆ ಎಂಬ ಹೇಳಿಕೆ ನೀಡುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಯತೀಂದ್ರ ಸಿದ್ದರಾಮಯ್ಯರು ಯಾಕೆ ಪದೇ ಪದೇ ಈ ರೀತಿ ಹೇಳುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ನಮಗೂ ಮಾತನಾಡಲು ಬರುತ್ತದೆ. ಪಕ್ಷದ ಶಿಸ್ತು ಪಾಲನೆ ಮಾಡುವ ಸಲುವಾಗಿ ಸುಮ್ಮನಿದ್ದೇವೆ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.





Leave a comment