SUDDIKSHANA KANNADA NEWS/ DAVANAGERE/ DATE:30-05-2024
ದಾವಣಗೆರೆ: ನಾವು ಯಾರ ಗಂಟು ಹೊಡೆದಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಟಾಂಗ್ ನೀಡಿದರು.
ಎಂಸಿಸಿ ಬಿ ಬ್ಲಾಕ್ ನಲ್ಲಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಯಾರೂ ಬೆಟ್ಟಿಂಗ್ ಕಟ್ಟಬೇಡಿ, ಕಾಂಗ್ರೆಸ್ ನವರು ಹಣ ವಾಪಸ್ ಕೊಡುವುದಿಲ್ಲ ಎಂಬ ಸಿದ್ದೇಶ್ವರರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪನವರು ನಾವು ಕಷ್ಟಪಟ್ಟು ದುಡಿದಿದ್ದೇವೆ. ಗುಟ್ಕಾ ಮಾರಾಟ ಮಾಡಿ ಹಣ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಗುಟ್ಕಾ ಮಾರಿ ಹಣ ಮಾಡಿರುವ ಸಿದ್ದೇಶ್ವರ ಅವರು, ಸೇಲ್ಸ್ ಟ್ಯಾಕ್ಸ್ ಕಟ್ಟದೇ ಹಣ ಮಾಡಿದ್ದಾರೆ. ನಾವು ಆ ರೀತಿ ಮಾಡಿಲ್ಲ. ನಮ್ಮದೇನಿದ್ದರೂ ಕೊಡುವ ಕೈ. ಸಿದ್ದೇಶ್ವರ ಅವರದ್ದೇನಿದ್ದರೂ ಬಂದಿದ್ದನ್ನು ಒಳಗೆ ಇಟ್ಟುಕೊಳ್ಳುವುದು ಎಂದು ಹೇಳಿದರು.
ಅವರದ್ದು ಕಳ್ಳ ಗಂಟು. ನಮ್ಮದಲ್ಲ. ಗುಟ್ಕಾ ಅಕೌಂಟ್ ಜಾಸ್ತಿ ಇದೆ. ನಾವು ಸರಿಯಾಗಿಯೇ ತೆರಿಗೆ ಪಾವತಿ ಮಾಡುತ್ತೇವೆ, ಅವರ ರೀತಿ ತೆರಿಗೆ ಉಳಿಸಿಕೊಂಡು ಹಣ ಹೊಡೆದಿಲ್ಲ ಎಂದು ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್, ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್, ವೀರಣ್ಣ, ಅಣಬೇರು ರಾಜಣ್ಣ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್ ಮತ್ತಿತರರು ಹಾಜರಿದ್ದರು.