SUDDIKSHANA KANNADA NEWS/ DAVANAGERE/ DATE:22-09-2024
ದಾವಣಗೆರೆ: ದಾವಣಗೆರೆ ನಗರದ ಬೇತೂರು ರಸ್ತೆಯ ವೆಂಕಟೇಶ್ವರ ನಗರದಲ್ಲಿ ನಡೆದ ಗಲಭೆ ಹಿಂದೆ ಬಿಜೆಪಿ ಪ್ರಚೋದನೆ ಇರುವುದು ಕಂಡು ಬರುತ್ತಿದೆ. ದಾವಣಗೆರೆಯಲ್ಲಿ ಗಲಾಟೆಯಾದಾಗ ನಾನೂ ಊರಲ್ಲಿ ಇರಲಿಲ್ಲ. ಇದ್ದಿದ್ದರೆ ಬೇರೆಯೇ ಇತ್ತು. ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು. ಸಾಮರಸ್ಯದಿಂದ ಜೀವನ ಸಾಗಿಸಬೇಕು. ಮತ್ತೆ ಗಲಾಟೆಯಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಜನುಮದಿನ ಆಚರಣೆ ಹಾಗೂ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ
ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಾವಣಗೆರೆ ಯಾವಾಗಲೂ ಶಾಂತವಾಗಿರುವ ಊರು. ಸುಮಾರು 25ರಿಂದ 30 ವರ್ಷದಿಂದ ನೋಡುತ್ತಿದ್ದೇವೆ. ಹಿಂದೆ ಒಮ್ಮೆ
ಗಲಾಟೆ ಆಗಿತ್ತು. ಮತ್ತೆ ಆಗಿರಲಿಲ್ಲ ಎಂದು ತಿಳಿಸಿದರು.
ಕೆಲಸಕ್ಕೆ ಬಾರದ ರೀತಿಯಲ್ಲಿ ಕೆಲವರು ಕೋಮುಗಲಭೆ ಪ್ರಾರಂಭ ಮಾಡಿದ್ದಾರೆ. ಯಾರು ಪ್ರೇರಣೆ ಮಾಡಿದ್ದಾರೆ? ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿಯವರು ಕೋಮುಗಲಭೆಯಂಥ ಕೆಲಸ
ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ಪ್ರೇರಣೆ ಜಾಸ್ತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿಯ ಮಾಜಿ ಶಾಸಕ ಎಂ ಪಿ. ರೇಣುಕಾಚಾರ್ಯ ವಿರುದ್ಧವೂ ಕೆಂಡಕಾರಿದ ಶಾಮನೂರು ಶಿವಶಂಕರಪ್ಪ ಅವರು, ಹೊನ್ನಾಳಿಯಿಂದ ರೇಣುಕಾಚಾರ್ಯ ದಾವಣಗೆರೆಗೆ ಬರುವುದು ಯಾಕೆ? ಗಲಭೆಕೋರರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.
ಇದಕ್ಕೆಲ್ಲಾ ಅಧಿಕಾರಿಗಳು ಆಸ್ಪದ ಕೊಡಬಾರದು. ಶಾಂತಿ ಕಾಪಾಡುವ ಕೆಲಸ ಅಧಿಕಾರಿ ವರ್ಗದವರು ಮಾಡಬೇಕು. ನನಗೆ ಬೆಂಬಲ ಕೊಟ್ಟೆ, ಅವರಿಗೆ ಬೆಂಬಲ ಕೊಟ್ಟೆ ಅಂತಾ ಮಾಡಬಾರದು. ಯಾರ ಮರ್ಜಿಗೂ ಒಳಗಾಗದೇ ಕಟ್ಟುನಿಟ್ಟಿನ
ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಮೊದಲಿನಿಂದಲೂ ಕಾಂಗ್ರೆಸ್ ಶಾಂತಿ ಮಂತ್ರ ಕಾಪಾಡಿಕೊಂಡು ಬಂದಿದೆ. ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂಬುದು ಪಕ್ಷದ ನಿಲುವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಪೂರೈಸಿದ್ದು, ಜನರಿಗೆ ಇದರ ಫಲ ನೀಡುತ್ತಿದೆ.
ಗ್ಯಾರಂಟಿಳು ಮುಂದುವರಿಯುತ್ತವೆ. ಸಿಎಂ ಸಿದ್ದರಾಮಯ್ಯ ಅವರು ನಿಶ್ಚಯವಾಗಿ ಹೇಳಿದ್ದಾರೆ. ಯಾವ ಕಾರಣದಿಂದಲೂ ಗ್ಯಾರಂಟಿ ನಿಲ್ಲಿಸಲ್ಲ. ಕೊಟ್ಟೇ ಕೊಡ್ತೇವೆ. ಸಣ್ಣದಾಗಿ ತೊಂದರೆ ಯಾದರೂ ನೀಡುತ್ತೇವೆ ಎಂದಿದ್ದಾರೆ. ಹೆಣ್ಣು ಮಕ್ಕಳಿಗೆ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ವಿದ್ಯಾವಂತರು, ಬಡವರಿಗೂ ಅನುಕೂಲವಾಗಿದೆ. ನಾನಾ ರೀತಿಯ ಸೌಕರ್ಯ ನೀಡುತ್ತಿದೆ. ಮುಂದೆಯೂ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭಾ ಸದಸ್ಯೆಯಾಗಿದ್ದಾರೆ. ಇನ್ನೂ ಐದು ವರ್ಷಗಳ ಕಾಲ ಇರುತ್ತಾರೆ. ದಾವಣಗೆರೆ, ಕರ್ನಾಟಕದ ಹಿತಕ್ಕೆ ಧಕ್ಕೆ ಬಾರದಂತೆ ಸೌಕರ್ಯ ಒದಗಿಸಲು ಶ್ರಮಿಸುತ್ತಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ
ಕೆಲಸ ಮಾಡುತ್ತಾರೆ. ಎಲ್ಲರಿಗೂ ಹೆಚ್ಚಿನ ರೀತಿಯಲ್ಲಿ ನಮ್ಮ ಜೊತೆಯಲ್ಲಿರಬೇಕು ಎಂದು ಹೇಳಿದರು.
ಲೋಕಸಭೆ ಚುನಾವಣೆ ಎಂದರೆ ಒಂದು ತಾಲೂಕಿಗೆ ಬರುತ್ತದೆ. ನಾನು ದಾವಣಗೆರೆ ದಕ್ಷಿಣ ಮಾತ್ರ. ಮಲ್ಲಿಕಾರ್ಜುನ್ ಅವರದ್ದು ದಾವಣಗೆರೆ ಉತ್ತರ ಕ್ಷೇತ್ರ ಮಾತ್ರ. ಆದ್ರೆ, ಲೋಕಸಭೆ ಇಡೀ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಗೊಂಡಿರುತ್ತದೆ. ಚುನಾಯಿತರಾದ ಮೇಲೆ ಮೊಟ್ಟ ಮೊದಲ ಬಾರಿಗೆ ಲೋಕಸಭೆಯಲ್ಲಿ ಕರ್ನಾಟಕ ಹಿತ ಕಾಪಾಡುವ ವಿಚಾರಗಳಲ್ಲಿ ಭಾಗವಹಿಸಿ ಧೈರ್ಯವಾಗಿ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದ್ದನ್ನು ಗಮನಿಸಿದ್ದೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ. ಎಸ್. ಬಸವಂತಪ್ಪ, ಶಾಂತನಗೌಡ, ದೇವೇಂದ್ರಪ್ಪ, ಪರಶುರಾಮ್ ಮತ್ತಿತರರು ಹಾಜರಿದ್ದರು.