SUDDIKSHANA KANNADA NEWS/ DAVANAGERE/ DATE:05-08-2024
ದಾವಣಗೆರೆ: ಸಿರಿಗೆರೆ, ಸಾಣೇಹಳ್ಳಿ ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ಸಂಬಂಧ ಚರ್ಚೆ ನಡೆಸಲು ಅಪೂರ್ವ ರೆಸಾರ್ಟ್ ನಲ್ಲಿ ಕರೆಯಲಾಗಿದ್ದ ಸಭೆಗೆ ಹೋಗಬೇಡಿ ಎಂದು ಮನೆಯವರು ಹೇಳಿದ್ದರು. ಹೊರಗಿನವರೂ ಸಲಹೆ ನೀಡಿದ್ದರು. ಮಠಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಬಂದಿದ್ದೇನೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಹೇಳಿದ್ದಾರೆ. ಈ ಮೂಲಕ ಸಭೆಗೆ ಹೋಗದಂತೆ ಶಿವಶಂಕರಪ್ಪರಿಗೆ ಒತ್ತಡ ಬಂದಿದ್ದು ನಿಜವಾಗಿದೆ.
ನಗರದ ಅಪೂರ್ವ ರೆಸಾರ್ಟ್ ನಲ್ಲಿ ಕರೆಯಲಾಗಿದ್ದ ಸಾದರ ಲಿಂಗಾಯತ ಒಕ್ಕೂಟದ ಸಭೆ ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪರು ಮಾತನಾಡುತ್ತಾ ಈ ಮಾತು ಹೇಳಿದ್ದಾರೆ. ಮೊದಲಿನಿಂದಲೂ ಸಿರಿಗೆರೆ ಶ್ರೀಗಳ ಮಾತು ಕೇಳಿಕೊಂಡೇ ಬಂದಿದ್ದೇನೆ. ಈಗಲೂ ಮಠ ಏಳಿಗೆಯಾಗಬೇಕು. ಭಕ್ತರಿಗೆ ಸಮಾಧಾನ ತರಬೇಕೆಂಬ ಅಪೇಕ್ಷೆಗೆ ನನ್ನ ಬೆಂಬಲ ಇದೆ ಎಂದು ತಿಳಿಸಿದರು.
ಆಗಸ್ಟ್ 18ರಂದು ಬೆಂಗಳೂರಿಗೆ ಹೋಗೋಣ. ನಾಲ್ಕೈದು ಪ್ರಮುಖರು ಹೋಗಿ ಸಿರಿಗೆರೆ ಶ್ರೀಗಳನ್ನು ಭೇಟಿಯಾಗೋಣ. ಏಕವ್ಯಕ್ತಿ ಡೀಡ್ ರದ್ದುಪಡಿಸಲು ಮನವಿ ಮಾಡೋಣ. ಹಿಂದಿನ ಶ್ರೀಗಳು ಮಾಡಿರುವ ವಿಲ್ ಹಾಗೂ ಬೈಲಾ ಪ್ರಕಾರ
ನಡದೆುಕೊಳ್ಳುವಂತೆ ಮನವಿ ಮಾಡೋಣ. ಶ್ರೀಗಳು ಒಪ್ಪಿದರೆ ಸರಿ. ಇಲ್ಲದಿದ್ದರೆ ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಸಮಾಜದ ಮುಖಂಡರು, ಶಾಸಕರು, ಮಾಜಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದು, ಸಿರಿಗೆರೆ, ಸಾಣೇಹಳ್ಳಿ ಮಠಕ್ಕೆ ಉತ್ತರಾಧಿಕಾರಿಗಳ ನೇಮಕ ಆಗಲೇಬೇಕೆಂಬ ಪಟ್ಟು ಹಿಡಿದಿರುವುದು ಸಮಸ್ಯೆ ಮತ್ತಷ್ಟು ಜಟಿಲವಾಗುವಂತೆ ಮಾಡಿದೆ. ಸಭೆಯಲ್ಲಿ ಮಾತನಾಡಿದ ಕೆಲವರಂತೂ ಮಠದ ವಿರುದ್ಧ ಹೋರಾಡೋಣ, ಪ್ರತಿಭಟಿಸೋಣ ಎಂಬ ಮಾತು ಆಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.