SUDDIKSHANA KANNADA NEWS/ DAVANAGERE/ DATE:29-11-2024
ದಾವಣಗೆರೆ: ದುಡ್ಡು, ರಾಜಕೀಯ ಅಧಿಕಾರ ಇದ್ದಾಕ್ಷಣ ಬಲಿಷ್ಠರಲ್ಲ. ಸ್ವಾಭಿಮಾನಿಗಳು ಹಾಗೂ ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಂಡವರು ಪವರ್ ಫುಲ್. ಇಂಥ ನಂಬಿಕೆ ಹೊಂದಿದವರೇ ಪ್ರಭಾವಶಾಲಿಗಳು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಜಗಳೂರು ಪಟ್ಟಣದ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ 202-24ನೇ ಸಾಲಿನ ಅಂತಿಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಕಾರ್ಯಕ್ರಮ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಆಲೋಚನೆಯಿಂದಲೇ ಅಸಮಾನತೆ ಶುರುವಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್ ನಂಥ ದೇಶಗಳಲ್ಲಿ ಅಧ್ಯಕ್ಷರು ಸೈಕಲ್ ನಲ್ಲಿ ವಾಕಿಂಗ್ ಮಾಡಿದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ, ಭಾರತದಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧ ಇದೆ. ಅಂಥದ್ದೊಂದು ಅನಿಷ್ಟ ಪದ್ಧತಿ ಬೆಳೆದುಕೊಂಡು ಬಂದಿದೆ. ರಾಜಕೀಯದಲ್ಲಿ ಅಧಿಕಾರದಲ್ಲಿದ್ದರೆ ದೊಡ್ಡ ಮನುಷ್ಯರು ಎಂಬಂತೆ ಬಿಂಬಿಸಲಾಗುತ್ತಿದೆ. ವಾಮ ಮಾರ್ಗ, ಅಡ್ಡ ದಾರಿ ಹಿಡಿದು ದುಡ್ಡು ಹಂಚಿ ಚುನಾವಣೆ ಗೆಲ್ಲುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಗೆದ್ದ ಮೇಲೆ ಜನರ ಸೇವೆಯತ್ತ ಗಮನವನ್ನೇ ನೀಡುವುದಿಲ್ಲ. ಇದು ಪ್ರಜಾಪ್ರಭುತ್ವದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಬೇಕು, ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಯಾವ ಕ್ಷೇತ್ರದಲ್ಲಿ ಮುಂದುವರಿದರೂ ನಿಮ್ಮದೇ ಆದ ಛಾಪು ಮೂಡಿಸುವಂತಾಗಬೇಕು. ಆಗ ಮಾತ್ರ ಜೀವನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.
ಉಜ್ವಲವಾಗುತ್ತಿರುವ ದೀಪ ಆರಿಸಲು ನಮ್ಮ ಸುತ್ತಮುತ್ತಲಿನ ತುಂಬಾ ಜನರು ಕಾಯುತ್ತಿರುತ್ತಾರೆ. ಇದು ದೊಡ್ಡ ದುರಂತ. ಉಜ್ವಲವಾಗಿ ಬೆಳೆಯಲು ಆರಂಭಿಸುತ್ತಿದ್ದಂತೆ ಭವಿಷ್ಯ ಆರಿಸಲು ಬರುತ್ತಾರೆ. ಇಂಥವರಿಂದ ಸ್ವಲ್ಪ ದೂರ ಇರಬೇಕು.
ಆಗ ಮಾತ್ರ ನಿಮ್ಮಲ್ಲೂ, ಸಮಾಜದಲ್ಲಿಯೂ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಾಧನೆ ಮಾಡಬೇಕಾದರೆ ನೋವು, ಅಪಮಾನ ಎದುರಿಸಬೇಕಾಗುತ್ತದೆ. ಇದು ಸಹಜ ಪ್ರಕ್ರಿಯೆ. ಇನ್ನೊಬ್ಬರ ಮೇಲೆ ಅವಲಂಬನೆ ಆಗುವುದನ್ನು ಬಿಡಬೇಕು. ಎಷ್ಟೇ ದೊಡ್ಡ ಬಿರುಗಾಳಿ ಬಂದರೂ ಎದುರಿಸಿ ನಿಲ್ಲುತ್ತೇನೆಂಬ ಛಲ ಇರಬೇಕು. ನಿರಂತರ ಕಲಿಕೆ ಇರಬೇಕು, ನಿಂತ ನೀರಾಗಬಾರದು. ಈ ಹಿಂದೆಯೇ ಬಸವಣ್ಣನವರು ಹೇಳಿದಂತೆ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬುದು ಇಂದಿಗೂ ಸತ್ಯ ಎಂದು ತಿಳಿಸಿದರು.
ಆಲೋಚನಾ ಶಕ್ತಿ, ಪ್ರಶ್ನಿಸುವ ಗುಣ, ಸ್ವಾವಲಂಬನೆಯತ್ತ ಹೆಚ್ಚು ಒತ್ತು ನೀಡಬೇಕು. ಆಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಹಲವಾರು ರೀತಿಯ ದೃಷ್ಟಿಕೋನ ಬೆಳೆಸಿಕೊಂಡಾಗ ನಮಗೆ ಜೀವನದಲ್ಲಿ ಅನೇಕ ಸಾಧ್ಯತೆಗಳು
ಕಾಣಿಸುತ್ತವೆ. ವ್ಯಕ್ತಿತ್ವ, ಮೌಲ್ಯ, ಯೋಗ್ಯತೆಯನ್ನು ನಾವೇ ಹೆಚ್ಚಿಸಿಕೊಳ್ಳಬೇಕು. ಇದೆಲ್ಲಾ ಸಾಧ್ಯವಾಗಬೇಕಾದರೆ ನಿರಂತರ ಓದು, ಸಂಘಟನೆ, ಆಲೋಚನಾ ಶಕ್ತಿಯಿಂದ ಮಾತ್ರ ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರ ಕಳಪೆಯಾಗಿದ್ದರೆ
ನಾವೂ ದಿನ ಕಳೆದಂತೆ ಕಳಪೆಯಾಗುತ್ತೇವೆ ಎಂದು ಹೇಳಿದರು.
ನಾನು ಬಡತನದಲ್ಲಿ ಹುಟ್ಟಿ ಬೆಳೆದಿದ್ದು. ಸತತ ಓದು, ಸಾಧನೆ ಮಾಡಬೇಕೆಂಬ ಹಂಬಲ, ಉತ್ತಮ ಸಂಸ್ಕಾರ, ಸ್ವಾವಲಂಬಿಯಾಗಿ ಹೋರಾಡಿದ ಪರಿಣಾಮ ಈಗ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಲು ಸಾಧ್ಯವಾಗಿದ್ದು. ನಾನು ಈಗಲೂ ಹೆಚ್ಚು ಪುಸ್ತಕ ಓದುತ್ತೇನೆ. ಎಲ್ಲರೂ ಪುಸ್ತಕ ಓದುವುದಕ್ಕೆ ಶುರು ಮಾಡಿದರೆ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ. ಆಲೋಚನ ಶಕ್ತಿ ಆಳವಾಗಿ ಬೇರೂರುತ್ತದೆ. ಧೈರ್ಯ ಕೊಡುತ್ತದೆ ಎಂದು ಸಲಹೆ ನೀಡಿದರು.
ದಂತಕಥೆ, ಸಾಹಿತ್ಯ, ಸಾಧಕರ ಪುಸ್ತಕಗಳನ್ನು ಓದುವಾಗ ಅವರು ಎದುರಿಸಿದ ಕಷ್ಟಗಳ ನಡುವೆ ನಮ್ಮ ಕಷ್ಟ ದೊಡ್ಡದಲ್ಲ ಎಂದೆನಿಸುತ್ತದೆ. ನಾವು ಮಾತ್ರ ಕಷ್ಟ ಎದುರಿಸುತ್ತಿಲ್ಲ. ಸಾವಿರಾರು ಜನರು ಕಷ್ಟ, ನೋವು, ಅವಮಾನ ಎದುರಿಸಿಯೇ
ಸಾಧನೆ ಮಾಡಿರುವುದು ಎಂಬುದು ಗೊತ್ತಾಗುತ್ತದೆ. ಹಣ ಇದ್ದಾಕ್ಷಣ ಸಾಧನೆ ಮಾಡಲು ಆಗದು. ಅಧಿಕಾರ ಇದ್ದಾಕ್ಷಣ ಜನಸೇವೆ ಮಾಡುವುದಕ್ಕಾಲ್ಲ, ಜನರ ಸೇವೆ ಮಾಡಬೇಕೆಂಬ ನಿಸ್ವಾರ್ಥ ಮನೋಭಾವನೆಯಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಜಗಳೂರು ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್. ಆರ್. ಕಲ್ಲೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಲಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಎನ್. ಎಂ. ಸ್ವಾಮಿ, ಅಮರ ಭಾರತಿ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಸಿ. ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.