SUDDIKSHANA KANNADA NEWS/ DAVANAGERE/ DATE:11-12-2024
ದಾವಣಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಡಿ. 16ರಂದು ಚಲೋ ಬೆಳಗಾವಿ – ಅಂಬೇಡ್ಕರ್ ಜಾಥಾ 2 ಆಯೋಜಿಸಲಾಗಿದೆ.
ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆಗಳನ್ನು ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಎಸ್ ಡಿ ಡಿಪಿ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಯೂ-ಟರ್ನ್ ಹೊಡೆಯುತ್ತಿದೆ. ಚಳಿಗಾಲದ ಅಧಿವೇಶನ ನಡೆಯುವ ಬೆಳಗಾವಿಯ ಸುವರ್ಣಸೌಧಕ್ಕೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಚಲೋ ಅಂಬೇಡ್ಕರ್ ಜಾಥಾ -2 ಹಮ್ಮಿಕೊಂಡಿದ್ದೇವೆ. ಪರಿಶಿಷ್ಟ
ಜಾತಿಗಳ ಒಳ ಮೀಸಲಾತಿ ಕೂಡಲೇ ಜಾರಿಗೊಳಿಸಬೇಕು. ಮುಸ್ಲಿಮರ 2ಬಿ ಮೀಸಲಾತಿ ಪುನರ್ಸ್ಥಾಪಿಸಿ ಶೇಕಡಾ 8ಕ್ಕೆ ಏರಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಜಾರಿಗೊಳಿಸಬೇಕು. ವಕ್ಸ್ ಆಸ್ತಿಗಳ
ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ಫ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ ಎಸ್ ಸಿ ಪಿ, ಟಿಎಸ್ ಪಿ ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು. 2025-26 ನಾಲಿನ ಬಜೆಟ್ ನಲ್ಲಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ
ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ವಿವಿಧ ಜಿಲ್ಲೆಗಳ ಮೂಲಕ ಡಿ. 13ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆ ಜಿಲ್ಲೆಯ ಹರಿಹರ ನಗರಕ್ಕೆ ತಲುಪಿ ಪ್ರೊ. ಬಿ ಕೃಷ್ಣಪ್ಪ ರವರ ಸಮಾಧಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಜಾಥವು ಪಕೀರಸ್ವಾಮಿ ಮಠದವರೆಗೆ ತಲುಪಲಿದೆ. ತದನಂತರ
ಜಾಥಾವು ಕಾಲ್ನಡಿಗೆಯೊಂದಿಗೆ ಶಿವಮೊಗ್ಗ ವೃತ್ತ, ಹರಪನಹಳ್ಳಿ ವೃತ್ತದ ಮೂಲಕ ಹರಿಹರ ತಾಲೂಕು ಕಚೇರಿವರೆಗೆ ಬಂದು ಸಭಾ ಕಾರ್ಯಕ್ರಮ ನಡೆಸಿ ರಾಣೆಬೆನ್ನೂರಿನ ಕಡೆಗೆ ಮುಂದುವರೆಯಲಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಕೋಶಧಿಕಾರಿ ಎ. ಆರ್. ತಾಹೀರ್, ಜಿಲ್ಲಾಧ್ಯಕ್ಷ ಯಾಹಿಯ, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್, ಹರಿಹರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಮಿವುಲ್ಲಾ ಮುಲ್ಲಾ ಹಾಜರಿದ್ದರು.