SUDDIKSHANA KANNADA NEWS/ DAVANAGERE/ DATE:24-03-2025
ದಾವಣಗೆರೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ದಾವಣಗೆರೆ ನಗರದ ಎಚ್ ಕೆ ಜಿ ಎನ್ ಶಾದಿ ಮಹಲ್ ನಲ್ಲಿ ಇಫ್ತಾರ್ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ಒಕ್ಕೂಟ ಸರ್ಕಾರ ತನ್ನ ಕೋಮು ದ್ವೇಷದ ಮುಂದುವರಿದ ಭಾಗವಾಗಿ ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ದೇಶವು ಜಾತ್ಯಾತೀತ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಧಾರ್ಮಿಕ ಹಕ್ಕುಗಳ ಅನುಸಾರ ಅವಕಾಶ ನೀಡಲಾಗಿದೆ. ಅದರಂತೆಯೇ ಇಲ್ಲಿನ ಮುಸ್ಲಿಮರು ಅವರ ಧಾರ್ಮಿಕ ಆಚಾರ ಮತ್ತು ವಿಚಾರಗಳನ್ನು ಅನುಸರಣೆ ಮಾಡುತ್ತಾರೆ ಎಂದರು.
ಆದರೆ ಒಕ್ಕೂಟ ಸರ್ಕಾರ, ಮುಸ್ಲಿಂ ಸಮುದಾಯದ ವಿರೋಧದ ನಡೆವೆಯೂ ಹಠಕ್ಕೆ ಬಿದ್ದು ವಕ್ಫ್ ತಿದ್ದುಪಡಿ ಬಿಲ್ ತರುವ ಮೂಲಕ ಮುಸ್ಲಿಮರ ಸಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸುವ ಹೊನ್ನಾರ ಇದರಲ್ಲಿ ಅಡಗಿದೆ. ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಉಳ್ಳವರು,ಸಮಾಜದಲ್ಲಿ ಇರುವ ಬಡವರು ಮತ್ತು ನಿರ್ಗತರಿಗಾಗಿ ಸಹಾಯ ಮಾಡಲಿಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿ ಇದು. ಈ ಆಸ್ತಿಗಳ ರಕ್ಷಣೆಗಾಗಿ ಸಂಘಟಿತ ಹೋರಾಟಕ್ಕೆ ಕರೆ ನೀಡಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024 ರಲ್ಲಿರುವ ಮಾರಕ ಅಂಶಗಳು ಯಾವುವು?, ಇದರ ಹಿಂದೆ ಅಡಗಿರುವ ಶಡ್ಯಂತರ ಏನು? ಇದನ್ನು ವಿರೋಧಿಸುವ ವಿಧಾನ ಹೇಗೆ.? ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಮರಿಗೆ ಮುಂದಿರುವ ಮಾರ್ಗೋಪಾಯಗಳು ಯಾವುವು ? ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್ ತಾಹೀರ್, ಕಾರ್ಯದರ್ಶಿಗಳಾದ ಮಹಮ್ಮದ್ ಮೋಹಸಿನ್, ಮೊಹಮ್ಮದ್ ಜುನೈದ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಸೈಯದ್ ರೆಹಮಾನ್ ಸಾಬ್, ಇಸ್ಮಾಯಿಲ್ ಜಬಿವುಲ್ಲಾ, ಶೋಯಿಬ್ ಮತ್ತುದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಏಜಾಜ್ ಅಹಮದ್, ಹರಿಹರ ಕ್ಷೇತ್ರ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ವುಲ್ಲಾ ಎಐಎಂಐಎಂ ಪಕ್ಷದ ಮೊಹಮ್ಮದ್ ಅಲಿ ಶೋಯಿಬ್,ಅಜ್ಮತ್ ಪಾಷಾ, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್, ಮುಸ್ಲಿಂ ಒಕ್ಕೂಟದ ಟಿ ಅಜ್ಗರ್, ಎಂ ಸಿ ಟಿ ಗ್ರೂಪ್ ನ ಮನ್ಸೂರ್ ಅಲಿ, ಮುಖಂಡರು ಮತ್ತು ಧರ್ಮ ಗುರುಗಳು ಹಾಗೂ ಇತರರು ಉಪಸ್ಥಿತರಿದ್ದರು.