SUDDIKSHANA KANNADA NEWS/ DAVANAGERE/ DATE:21-12-2024
ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನ ಅಕ್ರಮವಾಗಿ ಬಂಧಿಸಿದ್ದು ಅತ್ಯಂತ ತಪ್ಪು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಮುಖಭಂಗ ಮಾಡಿದ್ದು, ಸತ್ಯಮೇವ ಜಯತೆ! ಎಂಬ ವಾಕ್ಯ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ಧೋರಣೆಗೆ ಛೀಮಾರಿ ಹಾಕಿರುವ ಹೈಕೋರ್ಟ್, ತತಕ್ಷಣವಾಗಿ ಅವರನ್ನು ಬಿಡುಗಡೆಗೊಳಿಸಿ ಎಂದು ಆದೇಶ ನೀಡಿರುವುದು ಅತ್ಯಂತ ಸ್ವಾಗತಾರ್ಹ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಇನ್ನಾದರೂ ತಮ್ಮ ಹಿಟ್ಲರ್ ಧೋರಣೆ ಬಿಡಲಿ. ಒಂದು ಜವಾಬ್ದಾರಿಯುತ ಸರ್ಕಾರದ ರೀತಿ ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವುದನ್ನ ಕಲಿಯಲಿ ಎಂದು ಸಲಹೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಮಧ್ಯಂತರ ಆದೇಶ ನೀಡುವ ವೇಳೆ ಹೈಕೋರ್ಟ್, ಸಿ.ಟಿ. ರವಿ ಅವರಿಗೆ ನೋಟಿಸ್ ನೀಡದೆ ಬಂಧನ ಮಾಡಿದ್ದು ಕಾನೂನುಬಾಹಿರ ಎಂದು ತಿಳಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿವರಿಸಿದರು.
ದಾವಣಗೆರೆಯ ಸಕ್ರ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಧೋರಣೆಗೆ ಸಚಿವರ ಒತ್ತಡವೇ ಕಾರಣ. ಸಿ.ಟಿ.ರವಿ ಅವರನ್ನು ಬಂಧಿಸಿ ಒಬ್ಬ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ. ಇದು ಅತ್ಯಂತ ಆಘಾತಕರ ವಿಚಾರ ಎಂದು ತಿಳಿಸಿದರು.
ರವಿ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಆದರೆ, ಅವರನ್ನು ಒಬ್ಬ ಭಯೋತ್ಪಾದಕ ಎಂಬಂತೆ ನಡೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ರವಿಯವರನ್ನು ಒಂದು ಪಶುವಿನಂತೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇಂಥ ಘಟನೆ ಕರ್ನಾಟಕದ ರಾಜಕೀಯ ಮಾತ್ರವಲ್ಲ; ದೇಶದ ರಾಜಕಾರಣದಲ್ಲಿ ನಡೆದಿಲ್ಲ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಆದೇಶವು ರಾಜ್ಯ ಸರಕಾರಕ್ಕೆ ಏಟು ಕೊಟ್ಟಂತಿದೆ. ರವಿಯವರ ಬಂಧನವನ್ನು ಖಂಡಿಸಿ ಮತ್ತು ಸರಕಾರದ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕರೆಯಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿತ್ತು ಎಂದು ತಿಳಿಸಿದರು. ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದ ಗೂಂಡಾಗಳನ್ನು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದರು.
ವಿಧಾನಸಭೆ, ಪರಿಷತ್ತಿನ ವ್ಯಾಪ್ತಿಯೇ ಬೇರೆ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ರಾಜ್ಯಸಭಾ ಸದಸ್ಯನ ಬೆಂಬಲಿಗರು ಹೇಳಿದ್ದರು. ದೇಶದ್ರೋಹ ಮಾಡುವ ಅವರನ್ನು ಕೂಡಲೇ ಬಂಧಿಸಲಿಲ್ಲ; ಅವರನ್ನು ಹಾಗೇ ಬಿಟ್ಟು ನೋಟಿಸ್ ಕಳುಹಿಸಿದ್ದರು. ಅವರನ್ನು ಬಂಧಿಸಿದರೂ ಬಿರಿಯಾನಿ, ಕಬಾಬ್ ನೀಡಿದ್ದರು ಎಂದು ಟೀಕಿಸಿದರು.ವಿಧಾನಸಭೆ ಮತ್ತು ವಿಧಾನಪರಿಷತ್ತಿನ ವ್ಯಾಪ್ತಿಯೇ ಬೇರೆ ಎಂದು ನಮ್ಮ ವಕೀಲರು ವಾದಿಸುವಾಗ ಹೇಳಿದ್ದಾರೆ. ಇಲ್ಲಿ ನಡೆದಿರುವ ಘಟನೆಗೆ ಯಾರು ಶಿಕ್ಷೆ ಕೊಡಬೇಕು? ಡಿ.ಕೆ.ಶಿವಕುಮಾರ್? ಸಿದ್ದರಾಮಯ್ಯರೇ ಎಂದು ಪ್ರಶ್ನಿಸಿದರು.
ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ, ದೈಹಿಕ ಹಲ್ಲೆ- ಸಿ.ಟಿ.ರವಿ
ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಾತನಾಡಿ, ನೋಟಿಸ್ ನೀಡದೆ ಬಂಧಿಸಿದ್ದಾರೆ. 4 ಜಿಲ್ಲೆಗಳಲ್ಲಿ 11 ಗಂಟೆಗಳಿಗೂ ಹೆಚ್ಚು ಕಾಲ ಅಲೆದಾಡಿಸಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಪೊಲೀಸ್ ಬಲವನ್ನು ಉಪಯೋಗಿಸಿಕೊಂಡು ಮಾಡಿದೆ ಎಂದು ತಿಳಿಸಿದರು.
ನಮ್ಮ ಪಕ್ಷ, ನಮ್ಮ ರಾಜ್ಯಾಧ್ಯಕ್ಷರು, ಪಕ್ಷದ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು, ಪಕ್ಷದ ಎಲ್ಲ ಮುಖಂಡರು, ಶಾಸಕರು, ಸಂಸದರು, ಸಾಮಾನ್ಯ ಕಾರ್ಯಕರ್ತರು ಈ ಸಂಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದಾರೆ. ಆತ್ಮಸ್ಥೈರ್ಯವನ್ನು ತುಂಬುವುದರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು. ಅದಕ್ಕಾಗಿ ಅವರೆಲ್ಲರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು
ತಿಳಿಸಿದರು.
ಕೋರ್ಟ್ ಆದೇಶದ ಕುರಿತು ಪ್ರಸ್ತಾಪಿಸಿದ ಅವರು ಸತ್ಯಕ್ಕೆ ಜಯ ಸಿಕ್ಕಿದೆ. ಇದರಿಂದ ಹಿಗ್ಗುವುದಿಲ್ಲ; ಕಾಂಗ್ರೆಸ್ ಪಕ್ಷವು ಪೊಲೀಸ್ ಬಲ ದುರ್ಬಳಕೆ ಮಾಡಿ ಕುಗ್ಗಿಸುವ ಪ್ರಯತ್ನ ಮಾಡಿದೆ. ಕುಗ್ಗುವುದೂ ಇಲ್ಲ ಎಂದರು. ಕಾಂಗ್ರೆಸ್ ಕೊಡುವ ತೊಂದರೆಯು ಇನ್ನಷ್ಟು ಗಟ್ಟಿಯಾಗುವ ಶಕ್ತಿ ಕೊಡುತ್ತದೆ ಎಂದರಲ್ಲದೆ, ಸಂಕಷ್ಟದಲ್ಲಿ ಇದ್ದಾಗ ನಮ್ಮ ಕಾರ್ಯಕರ್ತರು ನೆರವಿಗೆ ಬಂದಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.