Home ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ಥಳಿ ಅನಾವರಣಗೊಳಿಸಿದ ಸಮರ್ಥ್
ದಾವಣಗೆರೆನವದೆಹಲಿ

ಎಂಸಿಸಿ ಬಿ ಬ್ಲಾಕ್ ನಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ಥಳಿ ಅನಾವರಣಗೊಳಿಸಿದ ಸಮರ್ಥ್

Share
Share

SUDDIKSHANA KANNADA NEWS/DAVANAGERE/DATE:26_12_2025

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ಪುತ್ಥಳಿಯನ್ನು ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಮೊಮ್ಮಗ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಸಮರ್ಥ್ ಶಾಮನೂರು ಅವರು, ಅಜ್ಜ ಶಾಮನೂರು ಶಿವಶಂಕರಪ್ಪರ ಮೇಲೆ ಎಂಸಿಸಿ ಬಿ ಬ್ಲಾಕ್ ಜನರು ಇಟ್ಟಿರುವ ಪ್ರೀತಿಗೆ ಈ ಪುತ್ಥಳಿ ಸಾಕ್ಷಿ. ನೀವೆಲ್ಲರೂ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದು ಮನಸ್ಸಿಗೆ ಮುದ ನೀಡಿದೆ. ಅಜ್ಜ ಮಾಡಿರುವ ಕಾರ್ಯ ಎಂದೆಂದಿಗೂ ಅಮರ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಮಾತನಾಡಿ, ದಾವಣಗೆರೆ ಜಿಲ್ಲೆಗೆ ಶಾಮನೂರು ಶಿವಶಂಕರಪ್ಪಾಜಿ ನೀಡಿರುವ ಕೊಡುಗೆ ಅಪಾರ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಧಣಿ ಶಾಮನೂರು ಶಿವಶಂಕರಪ್ಪರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿರುವ ಅವರ ಆದರ್ಶ ಇಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆಗೂ ಮಾದರಿ ಎಂದು ಬಣ್ಣಿಸಿದರು.

ರಾಜ್ಯ ರಾಜಕಾರಣದಲ್ಲಿ ಸೋಲರಿಯದ ಸರದಾರರಾಗಿ, ಸಂಸದರಾಗಿ, ಸಚಿವರಾಗಿ, ಶಾಸಕರಾಗಿ ಜನಸೇವೆ ಮಾಡಿರುವುದು ಜನರ ಮನಸಿನಲ್ಲಿ ಅಜರಾಮರವಾಗಿದೆ. ದಾವಣಗೆರೆ ಜಿಲ್ಲೆಯು ಮುಕುಟವನ್ನೇ ಕಳೆದುಕೊಂಡ ಅನುಭವ ಆಗಿದೆ. ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದಲ್ಲದೇ, ಕಾಟನ್ ಮಿಲ್ ಗಳು ಮುಚ್ಚಿದ ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆ, ಕೈಗಾರಿಕೆಗಳನ್ನ ಆರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಉದ್ಯೋಗದಾತರು ಎಂದು ತಿಳಿಸಿದರು.

ಕೊರೊನಾ ಸಂಕಷ್ಟಕ್ಕೆ ಇಡೀ ವಿಶ್ವವೇ ನಲುಗಿ ಹೋಗಿತ್ತು. ದಾವಣಗೆರೆಯೂ ಹೊರತಾಗಿರಲಿಲ್ಲ. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಎಂಸಿಸಿ ಬಿ ಬ್ಲಾಕ್ ಗೆ ಕೊರೊನಾ ಲಸಿಕೆ ನೀಡಿರಲಿಲ್ಲ. ಈ ವಿಚಾರ ಗಮನಕ್ಕೆ ತಂದ ಕೂಡಲೇ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಮಂದಿಗೆ ಲಸಿಕೆ ವ್ಯವಸ್ಥೆ ಮಾಡಿದರು. ಎಂಸಿಸಿ ಬಿ ಬ್ಲಾಕ್ ನ ಜನರಿಗೂ ಲಸಿಕೆ ನೀಡಿ ಜನಸೇವೆಗೆ ಮುಂದಾದರು. ಸುಮಾರು ಆರರಿಂದ ಎಂಟು ಕೋಟಿ ರೂಪಾಯಿ ಖರ್ಚಿನಲ್ಲಿ ಜನರಿಗೆ ಉಚಿತ ಲಸಿಕೆ ನೀಡಿದ ಸಂಜೀವಿನಿ ಪುರುಷ. ಇಂಥ ಯುಗಪುರುಷನನ್ನು ಕಳೆದುಕೊಂಡ ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಕರ್ನಾಟಕ ರಾಜ್ಯವೇ ಬಡವಾಗಿದೆ. ಶಿವಶಂಕರಪ್ಪಾಜಿ ಮಾಡಿರುವ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.

ಈ ವೇಳೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಇಟ್ಟಿಗುಡಿ ಮಂಜುನಾಥ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಎಂಸಿಸಿ ಬಿ ಬ್ಲಾಕ್ ನ ಹಿರಿಯ ನಾಗರಿಕರು, ಮುಖಂಡರು ಹಾಗೂ ಜನರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *