Home ದಾವಣಗೆರೆ ಬಸವ ತತ್ವದಡಿ ಸಮಾಜಸೇವೆ, ‘ಕಾಯಕ ಸಿರಿ’ ಯೋಜನೆ: ದಾವಣಗೆರೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಮಹಾಂತೇಶ್ ಒಣರೊಟ್ಟಿ ಘೋಷಣೆ
ದಾವಣಗೆರೆಬೆಂಗಳೂರು

ಬಸವ ತತ್ವದಡಿ ಸಮಾಜಸೇವೆ, ‘ಕಾಯಕ ಸಿರಿ’ ಯೋಜನೆ: ದಾವಣಗೆರೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಮಹಾಂತೇಶ್ ಒಣರೊಟ್ಟಿ ಘೋಷಣೆ

Share
ದಾವಣಗೆರೆ
Share

ದಾವಣಗೆರೆ: ಸಮಾಜಮುಖಿಯಾಗಿ ಬಸವಣ್ಣ ತತ್ವದಡಿ ಆರೋಗ್ಯ, ಶಿಕ್ಷಣ, ನೇತ್ರದಾನ, ಪರಿಸರ ಸಂರಕ್ಷಣೆ ಸೇರಿದಂತೆ ಪ್ರತಿಯೊಂದು ರಂಗದ ಶ್ರೇಯೋಭಿವೃದ್ಧಿಗೆ ಜನೋಪಯೋಗಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತೇನೆ ಎಂದು ದಾವಣಗೆರೆ ಲಯನ್ಸ್ ಕ್ಲಬ್ 317 ಹೆಚ್. ಜಿಲ್ಲೆಯ 2026-2027ನೇ ಸಾಲಿನ ನೂತನ ಅಧ್ಯಕ್ಷ ಮಹಾಂತೇಶ್ ವಿ. ಒಣರೊಟ್ಟಿ ಘೋಷಿಸಿದರು.

ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿನ ಲಯನ್ಸ್ ಭವನದಲ್ಲಿ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಯಾವಾಗಲೂ ಸಾಮಾಜಿಕ ಕಾರ್ಯಗಳ ಪರಂಪರೆ ಹೊಂದಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

‘ಕಾಯಕ ಸಿರಿ’ ವಿನೂತನ ಯೋಜನೆ:

ಸಮಾಜಕ್ಕೆ ಉಪಯುಕ್ತವಾಗುವ ನಿಟ್ಟಿನಲ್ಲಿ ‘ಕಾಯಕ ಸಿರಿ’ ಹೆಸರಿನಡಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕಾಯಕವು ಸಮಾಜಕ್ಕೆ ತೃಪ್ತಿ ನೀಡುವ ಜೊತೆಗೆ ಪ್ರತಿಯೊಬ್ಬರ ಜೀವನದಲ್ಲೂ ಬೆಳಕು ನೀಡುವಂತಿರಬೇಕು ಎಂಬುದು ತಮ್ಮ ಮುಖ್ಯ ಆಶಯವಾಗಿದೆ ಎಂದು ಅವರು ಹೇಳಿದರು.

ಭಾವನಾತ್ಮಕ ನೆನಪು ಹಂಚಿಕೊಂಡ ಅಧ್ಯಕ್ಷರು:

ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಿಂದ ತಂದೆ ದಾವಣಗೆರೆಗೆ ಬಂದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಮನೆಯಿಂದ ಹೊರಟವರು ನಮಗೆ ಸಿಕ್ಕಿದ್ದೇ ದಾವಣಗೆರೆಯಲ್ಲಿ. ತಾಯಿ, ತಂಗಿ ಮತ್ತು ನಾನು ತಂದೆ ಹುಡುಕಿಕೊಂಡು ದಾವಣಗೆರೆಗೆ ಬಂದೆವು. 1977-78ರಲ್ಲಿ ವ್ಯಾಪಾರ ಅರಸಿ ದಾವಣಗೆರೆಗೆ ಬಂದು ಬ್ರಾಹ್ಮಣರ ಮನೆಯಲ್ಲೇ ಮೂರು ತಿಂಗಳು ವಾಸವಿದ್ದೆವು. ನಮಗೆ ಆಶ್ರಯ ಕೊಟ್ಟಿದ್ದೇ ವಾಸುದೇವ್ ಮತ್ತು ಜಗದೀಶ್ ಅವರು. ಆಶ್ರಯ ಕೊಡುವ ಜೊತೆಗೆ ಅನ್ನದಾತರೂ ಆದರು. ಎಪಿಎಂಸಿ ಯಾರ್ಡ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಹುಡುಕಿಕೊಟ್ಟಿದ್ದೇ ಅವರು. ಆಗ ಮಾಡಿದ್ದ ಸಹಾಯ ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು.

ತಮ್ಮ ಭಾಷಣದ ವೇಳೆ ದಾವಣಗೆರೆಯಲ್ಲಿ ಕಳೆದ ಕಷ್ಟದ ದಿನಗಳನ್ನು ಭಾವುಕರಾಗಿ ಸ್ಮರಿಸಿದ ಅವರು, “1992ರಲ್ಲಿ ಬೆಂಗಳೂರಿನಿಂದ ನಾನು ದಾವಣಗೆರೆಗೆ ಬಂದಾಗ ತುಂಬಾ ಕಷ್ಟವಿತ್ತು. ಊರು ಬಿಟ್ಟು ಬಂದ ನಂತರ ತಂದೆಯವರನ್ನು ಹುಡುಕಿಕೊಂಡು ಆಜಾದ್ ನಗರದಲ್ಲಿ ಮೂರು-ನಾಲ್ಕು ತಿಂಗಳು ವಾಸವಿದ್ದೆವು. ತಂದೆಯವರು ಎಪಿಎಂಸಿಯಲ್ಲಿ ಖಾಲಿ ಚೀಲ ಹೊಲಿದು ತರುತ್ತಿದ್ದ ಹಣದಲ್ಲಿ ಜೀವನ ಸಾಗಿಸುತ್ತಿದ್ದೆವು” ಎಂದು ನೆನಪು ಮಾಡಿಕೊಂಡರು.

“ವೆಂಕಾಭೋವಿ ಶಿಕ್ಷಕಿ ನಾಗರತ್ನಮ್ಮ ಅವರು ಒಂದು ಇಡ್ಲಿ ಕೊಟ್ಟು ನೆರವಾಗಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದಾವಣಗೆರೆಯ ಜನತೆ ನೀಡಿದ ಅನ್ನ, ವಸತಿ ಹಾಗೂ ಆಸರೆಯಿಂದಲೇ ಇವತ್ತು ನಾನು ಈ ಹಂತಕ್ಕೆ ತಲುಪಿ ಅಧ್ಯಕ್ಷನಾಗಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದರು.

ನನ್ನ ಪತ್ನಿ ಮಂಜುಳಾ ಅವರು ನನ್ನೆಲ್ಲಾ ಸಮಾಜಸೇವೆ ಮತ್ತು ಏಳಿಗೆಗೆ ಸಾಥ್ ನೀಡಿದ್ದಾರೆ. ಈಕೆಯನ್ನು ಪಡೆದ ನಾನು ಭಾಗ್ಯವಂತ. ನನ್ನ ಪಾಲಿಗೆ ಆಕೆ ಕೊಟ್ಟ ಪ್ರೋತ್ಸಾಹ ಸಾಕಷ್ಟು. ಸಮಾಜಸೇವೆ ಮಾಡುತ್ತಾ ಹೋದರೆ ಕುಟುಂಬ ನಿರ್ವಹಣೆ
ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದರು. ಆದರೆ ಎಂದಿಗೂ ಒಳ್ಳೆಯ ಕಾರ್ಯಗಳಿಗೆ ಅಡ್ಡಿಪಡಿಸಿಲ್ಲ ಎಂದು ಪತ್ನಿ ಬಗ್ಗೆ ಮೆಚ್ಚುಗೆ ಮಾತನಾಡಿದರು.

ನೂತನ ಪದಾಧಿಕಾರಿಗಳ ಪ್ರತಿಷ್ಠಾಪನಾ ಸಮಾರಂಭ ಹಾಗೂ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ  ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಮಂಜುಳಾ ಮಹಾಂತೇಶ್ ವಿ. ಒಣರೊಟ್ಟಿ ನೆರವೇರಿಸಿದರು. 317 ಹೆಚ್. ಲಯನ್ಸ್ ಜಿಲ್ಲಾ ಗೌರ್ನರ್ ಆರ್. ಜಿ. ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನೂತನ ಸದಸ್ಯರಿಗೆ ಪ್ರಮಾಣ ಮತ್ತು ವಚನ ಬೋಧನೆಯನ್ನು ಲಯನ್ಸ್ ಮಾಜಿ ಗೌರ್ನರ್ ಡಾ. ಬಿ. ಎಸ್. ನಾಗಪ್ರಕಾಶ್ ನಿರ್ವಹಿಸಿದರು. ಅತಿಥಿಗಳಾಗಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಎಸ್. ಶಿವಮೂರ್ತಿ, ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಎಸ್. ವೆಂಕಟಾಚಲಂ, ವಲಯ-1ರ ವಲಯ ಅಧ್ಯಕ್ಷರಾದ ನೀಲಿ ಉಮೇಶ್, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎನ್. ಸಿ. ಬಸವರಾಜ್ ಆಗಮಿಸಿದ್ದರು. ಸಮಾರಂಭದ ಕಾರ್ಯನಿರ್ವಹಕರಾದ ಸಿ. ಅಜಯ್ ನಾರಾಯಣ, ಹೆಚ್. ವಿ. ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

2026-27ನೇ ಸಾಲಿನ ಕಾರ್ಯದರ್ಶಿಯಾಗಿ ಕೆ. ಎಸ್. ಸಂತೋಷ್, ಖಜಾಂಚಿಯಾಗಿ ಬಿ. ರಮೇಶ್, ಸಹ ಕಾರ್ಯದರ್ಶಿಯಾಗಿ ಮುರುಗೇಶ್ ಬಣಕಾರ್, ಸದಸ್ಯರಾಗಿ ಜೆ. ಎಸ್. ವೀರೇಶ್, ಎಸ್. ಶಿವಕುಮಾರ್, ಪಿ. ಜಯಣ್ಣ, ಜೆ. ಎಸ್. ಅಂಬರೀಷ್, ಶಿವನಗೌಡ ಟಿ. ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಡಾ. ಬಿ. ಎಸ್. ನಾಗಪ್ರಕಾಶ್, ಆರ್. ಜಿ. ಶ್ರೀನಿವಾಸಮೂರ್ತಿ, ಎಸ್. ಕೆ. ಶಿವಕುಮಾರ್, ಎನ್. ವಿ. ಬಂಡಿವಾಡ್, ಎಸ್. ಜಿ. ಉಳುವಯ್ಯ, ಎಸ್. ಶಿವಮೂರ್ತಿ, ಟಿ. ಎಂ. ಪಂಚಾಕ್ಷರಯ್ಯ, ದಿನೇಶ್ ಕೆ. ಶೆಟ್ಟಿ, ದೇವರಮನಿ ನಾಗರಾಜ್, ಹೆಚ್. ವಿ. ಮಂಜುನಾಥ ಸ್ವಾಮಿ, ಎಸ್. ಓಂಕಾರಪ್ಪ, ಎನ್. ಆರ್. ನಾಗಭೂಷಣ ರಾವ್, ವೈ. ಬಿ. ಸತೀಶ್, ಎಸ್. ಸಿ. ಹುಲ್ಲತ್ತಿ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *