ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಸಹೋದರಿಯರ ಮದುವೆಯ ಆಹ್ವಾನ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ತೀವ್ರ ವಿವಾದ ಹಾಗೂ ಬೆದರಿಕೆಗಳು ಎದುರಾಗಿವೆ.
ನವೆಂಬರ್ 12ರಂದು ನಡೆಯಬೇಕಿದ್ದ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ವರರ ಹೆಸರುಗಳು ಹಿಂದು ಹೆಸರುಗಳಾಗಿದ್ದೇ (ಸಂಜಯ್ ಮತ್ತು ಅನಿಲ್) ಈ ವಿವಾದಕ್ಕೆ ಕಾರಣವಾಗಿದೆ.
ಘಟನೆಯ ನಂತರ ಅಜ್ಞಾತ ವ್ಯಕ್ತಿಯೊಬ್ಬ ಮದುವೆ ಸಮಾರಂಭಕ್ಕಾಗಿ ಬುಕ್ ಮಾಡಲಾಗಿದ್ದ ಕಲ್ಯಾಣ ಮಂಟಪದ (ಗಾರ್ಡನ್) ಮಾಲೀಕನಿಗೆ ಕರೆ ಮಾಡಿ, ಈ ಮದುವೆ ನಡೆಸಿದರೆ ಹಿಂದು ಸಂಘಟನೆಗಳ ಕಾರ್ಯಕರ್ತರನ್ನು ಕರೆತಂದು ಗಲಾಟೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆಯಿಂದ ಹೆದರಿದ ಮಂಟಪದ ಮಾಲೀಕ ಕಾರ್ಯಕ್ರಮ ಆಯೋಜಿಸಲು ಹಿಂಜರಿಯುತ್ತಿದ್ದು, ಮದುವೆ ಸಿದ್ಧತೆಗಳಿಗೆ ಅಡ್ಡಿಯಾಗಿದೆ.
ಕುಟುಂಬದ ಸ್ಪಷ್ಟನೆ ಹಾಗೂ ಪರಂಪರೆ: ಮದುವೆಯಾಗಲಿರುವ ಇಬ್ಬರೂ ಯುವಕರು ಮತ್ತು ಅವರ ಕುಟುಂಬದವರು ಮುಸ್ಲಿಮರೇ ಆಗಿದ್ದಾರೆ. ಅವರ ಕುಟುಂಬದಲ್ಲಿ ತಲೆತಲಾಂತರಗಳಿಂದ ಮಕ್ಕಳ ಹೆಸರನ್ನು ಹಿಂದು ಶೈಲಿಯಲ್ಲಿ ಇಡುವ ಸಂಪ್ರದಾಯವಿದ್ದು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ವಧುವಿನ ಕುಟುಂಬ ಸ್ಪಷ್ಟಪಡಿಸಿದೆ.
ಹಳೆಯ ಸಂಬಂಧಿಕರಲ್ಲೇ ಮದುವೆ: ವಧುವಿನ ತಾಯಿ ಸುಲ್ತಾನ್ ಮತ್ತು ಹಿರಿಯ ಸಹೋದರಿ ಮಾತನಾಡಿ, ಈಗಾಗಲೇ ತಮ್ಮ ಹಿರಿಯ ಮಗಳನ್ನು ಇದೇ ಕುಟುಂಬಕ್ಕೆ ನೀಡಿ ಮದುವೆ ಮಾಡಲಾಗಿದ್ದು, ಎರಡೂ ಕುಟುಂಬಗಳ ಸಂಪೂರ್ಣ ಸಮ್ಮತಿಯಿಂದಲೇ ಈ ನಿಖಾ ನಿಶ್ಚಯವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ದೂರು ಹಾಗೂ ರಕ್ಷಣೆ ಮನವಿ: ಬೆದರಿಕೆ ಕರೆ ಹಾಕಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನವೆಂಬರ್ 12ರಂದು ಮದುವೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಬಂದೋಬಸ್ತ್ ನೀಡಬೇಕೆಂದು ಸಹೋದರಿಯರು ಕೌಟುಂಬಿಕ ಸಮೇತವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಶಹರಾನ್‌ಪುರ ಸರ್ಕಲ್ ಆಫೀಸರ್ ಶೈಲೇಂದ್ರ ಪ್ರತಾಪ್ ಗೌತಮ್, ಬೆದರಿಕೆ ಕರೆ ಕುರಿತು ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.





Leave a comment