ನಲ್ಗೊಂಡ: ತೆಲಂಗಾಣದ ನಲ್ಗೊಂಡ ಜಿಲ್ಲಾ ಕೇಂದ್ರದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನಡೆದ ಕೌಟುಂಬಿಕ ಕಲಹದ ವೇಳೆ, 43 ವರ್ಷ ವಯಸ್ಸಿನ ಮಹಿಳಾ ಗೃಹ ರಕ್ಷಕಿ ಮಹಾಬೂಬ್ ಬೀ ಅವರನ್ನು ಅವರ ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.
ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ದಂಪತಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಅದು ಉಲ್ಬಣಗೊಂಡು ವಿಕೋಪಕ್ಕೆ ತಿರುಗಿದೆ.
ಪೊಲೀಸ್ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಪತಿ ಸತೀಶ್ ತನ್ನ ಪತ್ನಿಯ ಕುತ್ತಿಗೆಯನ್ನು ತಿರುಚಿ, ತಲೆಯನ್ನು ನೆಲಕ್ಕೆ ಬಲವಾಗಿ ಬಡಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡು ಅತಿ ಹೆಚ್ಚು ರಕ್ತಸ್ರಾವವಾದ ಕಾರಣ ಮಹಾಬೂಬ್ ಬೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
2012ರಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡುಮಗ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಆರೋಪಿ ಸತೀಶ್ ಹಿಂದೆ ಗೃಹ ರಕ್ಷಕರಾಗಿ ಕೆಲಸ ಮಾಡಿದ್ದು, ಕೆಲವು ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದನು.
ಕೌಟುಂಬಿಕ ಕಲಹ ಹಾಗೂ ಕುಡಿತದ ಚಟ: ದಂಪತಿಗಳ ನಡುವೆ ಆಗಾಗ್ಗೆ ಕೌಟುಂಬಿಕ ವಿಚಾರಗಳ ಬಗ್ಗೆ ಜಗಳ ನಡೆಯುತ್ತಿತ್ತು. ಪತಿಯ ಮದ್ಯಪಾನದ ಚಟ ಹಾಗೂ ನಿರಂತರ ಕೌಟುಂಬಿಕ ಉದ್ವಿಗ್ನತೆಯೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಬಂಧನ: ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ನಲ್ಗೊಂಡ ಒನ್ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಮಕ್ಕಳ ಭವಿಷ್ಯ: ತಾಯಿಯನ್ನು ಕಳೆದುಕೊಂಡು, ತಂದೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಕಾರಣ ಮೂವರು ಮಕ್ಕಳು ಅನಾಥರಾಗುವಂತಾಗಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.





Leave a comment