SUDDIKSHANA KANNADA NEWS/ DAVANAGERE/ DATE:25-12-2024
ದಾವಣಗೆರೆ: ಅವ್ನು ಮೆಂಟಲ್. ಬಾರೋ ಮಾರಾಯ. ಅವ್ನ ಬಗ್ಗೆ ಏನ್ ಕೇಳ್ತೀರಾ. ಇದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ರೋಶ ಹೊರ ಹಾಕಿದ ಪರಿ.
ಬಸಾಪುರ ಗ್ರಾಮದಲ್ಲಿ ಮಹೇಶ್ವರ ಜಾತ್ರೆಗೆ ಆಗಮಿಸಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಮಾಧ್ಯಮದವರು ಶಿವಗಂಗಾ ಬಸವರಾಜ್ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕುರಿತಂತೆ ಪ್ರಶ್ನೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಏನು ಕೆಲಸ ಮಾಡಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವ್ನ ಬಗ್ಗೆ ಏನ್ ಕೇಳ್ತೀರಾ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಏಕವಚನದಲ್ಲಿಯೇ ಗುಡುಗಿದರು.
ಅವನ ಬಗ್ಗೆ ನಾನ್ ಏನು ಹೇಳಲಿ. ಮೊದಲು ಅವ್ನು ಅವನ ಅಣ್ಣಂಗೆ ಮರ್ಯಾದೆ ಕೊಡಲಿ. ಮೊದಲು ಅಣ್ಣ ತಮ್ಮಂದಿರನ್ನು ನೆಟ್ಟಗೆ ನೋಡಿಕೊಳ್ಳಲಿ. ಸರಿಯಾಗಿ ಇಟ್ಟುಕೊಳ್ಳಲು ಹೇಳಿ ಎಂದು ಕಿಡಿಕಾರಿದರು.
ಅವನು ಬೆಳೆದಿದ್ದೇ ಅವನ ಅಣ್ಣನಿಂದ. ಇದನ್ನು ಮೊದಲು ತಿಳಿದುಕೊಂಡು ಮಾತನಾಡಲಿ. ಅಣ್ಣ ತಮ್ಮಂದಿರ ಜೊತೆ ಚೆನ್ನಾಗಿರಲಿ. ಏನು ಮಾಡಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು. ಇಂಥವನ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಾ ಎಂದು ಶಿವಗಂಗಾ ಬಸವರಾಜ್ ಹೆಸರು ಪ್ರಸ್ತಾಪಿಸದೇ ಆಕ್ರೋಶ ವ್ಯಕ್ತಪಡಿಸಿದರು.