SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಲೋಕಸಭೆ ಚುನಾವಣಾ ಕಣ ರಂಗೇರಿದೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಪಕ್ಷವು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಘೋಷಿಸಿದೆ. ಈ ಬೆಳವಣಿಗೆ ನಡುವೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದ ಟೀಂ ಬಿಜೆಪಿಯ ಅಭ್ಯರ್ಥಿ ಬದಲಿಸಬೇಕು ಎಂಬ ಪಟ್ಟು ಹಿಡಿದಿದೆ. ಮಾತ್ರವಲ್ಲ, ನಾಮಪತ್ರ ಸಲ್ಲಿಸುವ ಕೊನೆ ದಿನದವರೆಗೆ ಕಾಲಾವಕಾಶ ಇದೆ. ಅಭ್ಯರ್ಥಿ ಬದಲಿಸಲೇಬೇಕು ಎಂದು ರವೀಂದ್ರನಾಥ್ ಒತ್ತಾಯಿಸಿದ್ದಾರೆ.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಾ. ಜಿ. ಎಂ. ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಿರುವ ಅಭ್ಯರ್ಥಿ ಬದಲಿಸಲೇಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಎಲ್ಲಾ ವಿಚಾರಗಳನ್ನು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ನಾಮಪತ್ರ ಸಲ್ಲಿಸುವ ಕೊನೆ ದಿನ ತನಕವೂ ಕಾಯುತ್ತೇವೆ. ಫೋನ್ ನಲ್ಲಿ ಮಾತನಾಡ್ತಾರೆ. ರಾಜ್ಯ ವರಿಷ್ಠರು, ಕೇಂದ್ರ ವರಿಷ್ಠರು ಮುಂದೆ ಬಂದು ಮಾತನಾಡಬೇಕು. ಇಲ್ಲದಿದ್ದರೆ ನಾವು ಹೋರಾಟ ನಡೆಸುತ್ತೇವೆ. ಎಲ್ಲಿ ಆದ್ರೂ ನೀವು ಫೋನ್ ಟ್ಯಾಪ್ ಮಾಡುತ್ತೀರಾ ಅಂತಾ ಫೋನ್ ನಲ್ಲಿ ನಾವು ಹೆಚ್ಚು ಎಲ್ಲಾ ವಿಚಾರಗಳನ್ನು ಮಾತನಾಡುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅಭ್ಯರ್ಥಿ ಬದಲಾವಣೆ ಆಗಬೇಕು. ಇಲ್ಲದಿದ್ದರೆ ಸಂಧಾನ ಆಗಬೇಕು. ಆಮೇಲೆ ಕೆಲಸ ಮಾಡುವ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ. 11 ಜನರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಂತಿಮವಾಗಿ ನಾಮಪತ್ರ ಸಲ್ಲಿಕೆ ದಿನ ಗೊತ್ತಾಗಲಿದೆ ಎಂದು ಕುತೂಹಲ ಹೆಚ್ಚಿಸಿದರು.
ಬಂಡಾಯ ಅಭ್ಯರ್ಥಿ ಅಲ್ಲ, ನಾವೇ ಅಧಿಕೃತ ಬಿಜೆಪಿ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದೂ ರವೀಂದ್ರನಾಥ್ ಹೇಳಿದರು.