SUDDIKSHANA KANNADA NEWS/ DAVANAGERE/ DATE:27-11-2024
ದಾವಣಗೆರೆ: ಜಿಲ್ಲೆಯ ಬಿಜೆಪಿ ಹಿರಿಯ ಮುತ್ಸದ್ದಿ ರಾಜಕಾರಣಿ, ರೈತ ನಾಯಕ, ಮಾಜಿ ಸಚಿವ ಎಸ್.ಎ.ವೀಂದ್ರನಾಥ್ ಅವರ 79 ನೇ ಹುಟ್ಟುಹಬ್ಬದ ಅಂಗವಾಗಿ ಆವರೆಗೆರೆ ಗ್ರಾಮದ ರವೀಂದ್ರನಾಥ್ ಅಭಿಮಾನಿಗಳು ಹಾಗೂ 30 ನೇ ವಾರ್ಡ್ ಬಿಜೆಪಿ ಕಾರ್ಯಕರ್ತರು ಶಿರಮಗೊಂಡನಹಳ್ಳಿಯಲ್ಲಿನ ಎಸ್.ಎ. ರವೀಂದ್ರನಾಥ್ ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿ ಸಿಹಿ ಹಂಚಿ ಸಂಭ್ರಮಿಸಿದರು.
ಎಸ್. ಎ. ರವೀಂದ್ರನಾಥ್ ಅವರ ದಂಪತಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಅಜ್ಜನಗೌಡ್ರು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಹೋರಾಟದ ಹಾದಿ ನಮಗೆಲ್ಲರಿಗೂ ದಾರಿದೀಪ ಎಂದು ಹೇಳಿದರು.
ಎಸ್. ಎ. ರವೀಂದ್ರನಾಥ್ ಅವರು ಚಿತ್ರದುರ್ಗ- ದಾವಣಗೆರೆ ಜಿಲ್ಲೆಯಾಗಿದ್ದಾಗ ಹಳ್ಳಿ ಹಳ್ಳಿಗೂ ಹೋಗಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಬ್ಬರು. ರವೀಂದ್ರನಾಥ್ ಅವರು, ಸಕ್ಕರೆ ಸಚಿವರಾಗಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ದಾವಣಗೆರೆ ಇತಿಹಾಸದಲ್ಲಿ ರವೀಂದ್ರನಾಥ್ ಅವರ ಕೊಡುಗೆ ಅನನ್ಯ. ಬಿಜೆಪಿ ಪಕ್ಷ ಸಂಘಟನೆ, ಬಲಿಷ್ಠಗೊಳ್ಳಲು ಹಾಗೂ ಸಚಿವರು, ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಶ್ರೀರಕ್ಷೆಯಾಗಿತ್ತೆಂದರೆ ಅತಿಶಯೋಕ್ತಿ ಅಲ್ಲ ಎಂದು ತಿಳಿಸಿದರು.
ರೈತರ ಸಮಸ್ಯೆಗಳಿಗೆ ಯಾವಾಗಲೂ ಸ್ಪಂದಿಸುತ್ತಿದ್ದ ರವೀಂದ್ರನಾಥ್ ಅವರು ಹೋರಾಟಕ್ಕೆ ಧುಮುಕಿದರೆ ಬೇಡಿಕೆ ಈಡೇರುವವರೆಗೆ ಬಿಡುತ್ತಿರಲಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಇಷ್ಟೊಂದು ಬಲಿಷ್ಠವಾಗಿರಲು ಸಾಧ್ಯವಾಗಿದ್ದು
ರವೀಂದ್ರನಾಥ್ ಅವರಂಥ ಹಿರಿಯರ ಹೋರಾಟದಿಂದ. ರವೀಂದ್ರನಾಥ್ ಅವರಿಗೆ 79 ವರ್ಷವಾಗಿದ್ದರೂ ಇಂದಿಗೂ ಕಾರ್ಯಕರ್ತರು, ಮುಖಂಡರಿಗೆ ಸ್ಪಂದಿಸುವ ರೀತಿ ಅನನ್ಯ. ಸುಲಭವಾಗಿ ಎಲ್ಲರಿಗೂ ಸಿಗುವ ರವೀಂದ್ರನಾಥ್ ಅವರು
ಆತ್ಮೀಯವಾಗಿ ಮಾತನಾಡಿಸುತ್ತಾರೆ, ಅಷ್ಟೇ ಗೌರವಯುತವಾಗಿ ನಡೆದುಕೊಳ್ಳುವ, ಎಷ್ಟು ಬೇಕೋ ಅಷ್ಟೇ ಮಾತನಾಡಿದರೂ ತೂಕವಾದ ಮಾತುಗಳು ನಮಗೆಲ್ಲಾ ಆಶೀರ್ವಾದ ಇದ್ದಂತೆ ಎಂದು ಅಜ್ಜನಗೌಡ್ರು ತಿಳಿಸಿದರು.
ದಾವಣಗೆರೆ ಜಿಲ್ಲೆಯ ಇತಿಹಾಸದಲ್ಲಿ ಸತತ ಏಳು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಎಂಬ ಹೆಗ್ಗಳಿಕೆ ರವೀಂದ್ರನಾಥ್ ಅವರ ಹೆಸರಿನಲ್ಲಿಯೇ ಇದೆ. ರೈತರ ಪರ ಕಾಳಜಿ ಹೊಂದಿರುವ ರವೀಂದ್ರನಾಥ್ ಅವರ ಜೀವನ ನಮಗೆಲ್ಲಾ ಆದರ್ಶ ಎಂದು ಬಣ್ಣಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಶ್ರೀಧರ್, ಜಿ ಎಸ್ ಬಸವರಾಜ್, ಚಿಕ್ಕನಹಳ್ಳಿ ಮಂಜುನಾಥ್, ಎ. ಎಸ್. ಕಲ್ಲೇಶ್, ಆವರಗೆರೆ ರುದ್ರೇಶ್, ಸುರೇಶ್ ಗೋಶಾಲೆ, ಕರಿಬಸಪ್ಪ, ವೀರೇಶನಾಯ್ಕ, ಪುನೀತ್ ಕುಮಾರ್, ನಿರಂಜನ್ ಮತ್ತಿತರರು ಹಾಜರಿದ್ದರು.