SUDDIKSHANA KANNADA NEWS/ DAVANAGERE/ DATE:01-04-2025
ದಾವಣಗೆರೆ: ಮಾಜಿ ಸಚಿವ, ದಾವಣಗೆರೆ ಜಿಲ್ಲೆಯ ಬಿಜೆಪಿ ಭೀಷ್ಮ ಎಂದೇ ಕರೆಯಿಸಿಕೊಳ್ಳುವ ಎಸ್. ಎ. ರವೀಂದ್ರನಾಥರಿಗೆ ದಾವಣಗೆರೆ ವಿವಿಯು ಗೌರವ ಡಾಕ್ಟರೇಟ್ ನೀಡಿದೆ.
ಏಪ್ರಿಲ್ 2 ರಂದು ನಡೆಯುವ ಘಟಿಕೋತ್ಸವದಲ್ಲಿ ಎಸ್. ಎ. ರವೀಂದ್ರನಾಥ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಸರಳ ಸಜ್ಜನಿಕೆಯ ನಾಯಕರಾಗಿ, ಶಾಸಕರಾಗಿ, ಸಚಿವರಾಗಿ, ಜನಾನುರಾಗಿಯಾಗಿ ಬೆಳೆದ ಎಸ್.ಎ. ರವೀಂದ್ರನಾಥ ಅವರು ರೈತ ಚಳುವಳಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕೃಷಿಕರ ಬೆನ್ನೆಲುಬಾಗಿ ಸಂಪುಟ
ದರ್ಜೆಯ ಸಚಿವರಾದರೂ ತಮ್ಮ ಹುಟ್ಟೂರಾದ ಶಿರಮಗೊಂಡನಹಳ್ಳಿಯಲ್ಲಿಯೇ ವಾಸಿಸುತ್ತಾ ಜನಸಾಮಾನ್ಯರೊಂದಿಗೆ ಬೆರೆಯುವ ಅಪರೂಪದ ರಾಜಕಾರಣಿಯಾಗಿದ್ದಾರೆ.
ಎಸ್.ಎ. ರವೀಂದ್ರನಾಥ ಅವರು 26, ನವೆಂಬರ್ 1946ರಂದು ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯ ರೈತ ಕುಟುಂಬದ ಬಸಪ್ಪ ಮತ್ತು ನಾಗಮ್ಮ ದಂಪತಿಯ ನಾಲ್ಕನೆಯ ಪುತ್ರರಾಗಿ ಜನಿಸಿದರು.
ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು, ಶಾಮನೂರಿನಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ಮೋತಿ ವೀರಪ್ಪ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದರು. ದಾವಣಗೆರೆ ಡಿ.ಆರ್.ಎಂ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಧಾರವಾಡದ
ಜೆ.ಎಸ್.ಎಸ್. ಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದುಕೊಂಡರು.
1972ರಲ್ಲಿ ಶಿರಮಗೊಂಡನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ, ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ತದನಂತರ, ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. 1994ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿ ವಿಧಾನಸೌಧ ಪ್ರವೇಶಿಸಿದ ಇವರು ಸತತ ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾದರು. 2006ರಲ್ಲಿ ಗ್ರಾಮೀಣ ನೀರು ಪೂರೈಕೆ ನೈರ್ಮಲ್ಯ ಮತ್ತು ಸಕ್ಕರೆ ಖಾತೆ ಸಚಿವರಾಗಿ, 2008ರಲ್ಲಿ ಕೃಷಿ ಸಚಿವರಾಗಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ, ನಂತರ ತೋಟಗಾರಿಕಾ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಭಾಗದ ಜನರ ಬಹು ದಿನಗಳ ಕನಸು ನನಸಾಗಲು ಇವರ ಅಧಿಕಾರವಧಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಭದ್ರಾ ನಾಲೆಯನ್ನು ಆಧುನೀಕರಣಗೊಳಿಸಲಾಯಿತು. ದಾವಣಗೆರೆ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ದಾವಣಗೆರೆ ವಿಶ್ವವಿದ್ಯಾನಿಲಯದ ಸ್ಥಾಪನೆ, ಶಿವಮೊಗ್ಗ ಹಾಗೂ ಬಾಗಲಕೋಟೆಯಲ್ಲಿ ಕ್ರಮವಾಗಿ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಸ್ಥಾಪನೆ, ದಾವಣಗೆರೆಯಲ್ಲಿ ಸುಸಜ್ಜಿತ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಈ ಮುಂತಾದ ಕಾರ್ಯಗಳು ಇವರ ಅಧಿಕಾರಾವಧಿಯಲ್ಲಿ ಜರುಗಿದ ಪ್ರಮುಖ ಮೈಲುಗಲ್ಲುಗಳಾಗಿವೆ.
ಎಲ್ಲಾ ವಿಷಯಗಳಲ್ಲಿ ಪಾರದರ್ಶಕತೆ, ವಿನೂತನ ಕಾಯಕಲ್ಪ ನೀಡುವುದರ ಮೂಲಕ ಜನಪರ ಕಾರ್ಯಗಳನ್ನು ಮಾಡಿ ಅನೇಕರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಸಚಿವರಾಗಿ ಅನೇಕ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ರಾಜ್ಯದ ಜನರ ಮನಗೆದ್ದಿರುವ ಶ್ರೀಯುತರು ತಮ್ಮ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಎಲ್ಲಾ ಧರ್ಮ, ಜಾತಿ, ವರ್ಗದ ಜನರನ್ನೂ ಒಟ್ಟಾಗಿ ತೆಗೆದುಕೊಂಡು ಸರ್ವ ಸಮಾನತೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಎ. ರವೀಂದ್ರನಾಥ ಅವರು ಜನಾನುರಾಗಿ ರಾಜಕಾರಣಿಯಾಗಿ, ರೈತ ಹಿತಾಕಾಂಕ್ಷಿಯಾಗಿ ಕೃಷಿ, ಸಹಕಾರ ಮತ್ತು ತೋಟಗಾರಿಕೆ ಹಾಗೂ ನೀರಾವರಿ ಯೋಜನೆಗೆ ಇವರು ನೀಡಿರುವ ಅಪ್ರತಿಮ ಸಾಧನೆಯನ್ನು ಗುರುತಿಸಿ, ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಿದೆ.