SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಜಾತಿ ರಾಜಕಾರಣ ಸೇರಿದಂತೆ ವಿವಿಧ ಪ್ರಚಲಿತ ಹಾಗೂ ಮಹನೀಯರ ಕುರಿತ ಪ್ರಬಂಧ ಸ್ಪರ್ಧೆಗಳನ್ನು ಇನ್ನೆರಡು ತಿಂಗಳಲ್ಲಿ ಆಯೋಜಿಸಲಾಗುವುದು, ಈ ಮೂಲಕ ವಿಚಾರ ಕ್ರಾಂತಿ ಮುಂದುವರಿಸಲಾಗುವುದು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಘೋಷಿಸಿದರು.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗ ಮಂದಿರದಲ್ಲಿ ಸ್ವಾಭಿಮಾನಿ ಬಳಗವು ಏರ್ಪಡಿಸಿದ್ದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ
ವಿತರಣೆ ಹಾಗೂ ವಿಚಾರ ಸಂಕ್ರಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಚಾರಧಾರೆಗಳು ಯಾವಾಗಲೂ ಜನರಲ್ಲಿ ಚರ್ಚಿತವಾಗುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.
ಈಗ ಹೆಚ್ಚು ಕಡಿಮೆ ಎಲ್ಲಾ ಪಕ್ಷದೊಳಗೂ ಪ್ರಜಾಪ್ರಭುತ್ವ ಇಲ್ಲ. ಈ ವಿಚಾರ ಹೆಚ್ಚು ಪ್ರಜೆಗಳಲ್ಲಿ ನಿರಂತರವಾಗಿ ಚರ್ಚೆಯಾಗಬೇಕು ಎಂಬುದು ಬಳಗದ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಏರ್ಪಡಿಸಿದ್ದ ಕುಟುಂಬ ರಾಜಕಾರಣ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವೇ? ಪ್ರಬಂಧ ಸ್ಪರ್ಧೆಗೆ ಭಾರೀ ಸ್ಪಂದನೆ ಸಿಕ್ಕಿದೆ. ಮುಕ್ತವಾಗಿ ಪ್ರಬಂಧ ಬರೆದಿದ್ದಾರೆ. ಇದು ಖುಷಿಯ ವಿಚಾರ ಎಂದು ತಿಳಿಸಿದರು.
ಒಂದು ಮತ ಒಂದು ಮೌಲ್ಯ ವ್ಯವಸ್ಥೆ ಭಾರತದಲ್ಲಿ ಇದೆ. ಪ್ರತಿಯೊಬ್ಬರಿಗೂ ಒಳ್ಳೆಯ ಮನೆ, ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ, ಶ್ರೀಮಂತರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ ಸಿಗುತ್ತಿರುವುದು ಪ್ರಜಾಪ್ರಭುತ್ವಕ್ಕೆ
ಮಾರಕ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದೆ. ಆದ್ರೆ, ಉತ್ಕೃಷ್ಣ ಮಟ್ಟದ ಶಿಕ್ಷಣ ಹಾಗೂ ಅವಕಾಶ ಸಿಗದ ಕಾರಣ ಕಮರಿ ಹೋಗುತ್ತಿದೆ. 1ಲಕ್ಷದ 7 ಸಾವಿರ ಸರ್ಕಾರಿ ಶಾಲೆಗಳಿಗೆ ಒಬ್ಬ ಶಿಕ್ಷಕರು ಮಾತ್ರ ಇದ್ದಾರೆ. ದೇಶದ ಈ ಸರ್ಕಾರಿ ಶಾಲೆಗಳು ಅಳಿವಿನಂಚಿಲ್ಲಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಕಾರಣಿಗಳು ಮತ ಕೇಳಲು ಬಂದಾಗ ತಾನು ಮಾಡಿದ ಸಾಧನೆ, ಜನಸೇವೆ, ಹಳ್ಳಿಗಳಲ್ಲಿ ಮೌಲ್ಯಯುತ, ಗುಣಮಟ್ಟದ ಶಿಕ್ಷಣ, ವ್ಯಾಪಾರ, ಉದ್ಯೋಗ ಸೇರಿದಂತೆ ಈಡೇರಿಸಿದ್ದ ಕುರಿತಂತೆ ಅಂಕಿ ಅಂಶ ನೀಡಲ್ಲ. ದೇವಸ್ಥಾನ, ಹಬ್ಬ, ಕ್ರಿಕೆಟ್ ಗೆ ಹಣ ನೀಡಿ ಗೆಲ್ಲುವ ಮಾರ್ಗ ಕಂಡುಕೊಂಡಿದ್ದಾರೆ. ಚುನಾವಣೆಗೆ 15 ದಿನ ಮುನ್ನ ಬಂದು ಮತ ಕಳುತ್ತಿದ್ದಾರೆ. ಹೀಗಾದರೆ ಜನರ ಅಭಿವೃದ್ಧಿ ಮತ್ತು ಹಳ್ಳಿಗಳ ಉದ್ದಾರ ಸಾಧ್ಯವೇ ಎಂದು ಜಿ. ಬಿ. ವಿನಯ್ ಕುಮಾರ್ ಪ್ರಶ್ನಿಸಿದರು.
ರೈತ ಹೋರಾಟಗಾರ ತೇಜಸ್ವಿ ವಿ. ಪಟೇಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ವಕೀಲರಾದ ಸಿ. ಪಿ. ಅನಿತಾ, ಚಿತ್ರನಿರ್ದೇಶಕರು ಹಾಗೂ ಉಪನ್ಯಾಸಕ ಮಾರುತಿ ಶಾಲೆಮನೆ, ಎಸ್. ಎಂ. ಕೃಷ್ಣ ಕಾಲೇಜಿನ ಪ್ರಾಂಶುಪಾಲ ಕೆ. ಎಸ್. ಗಂಗಾಧರ್, ಗುರುದೇವ ಬಳುಂಡಗಿ ಮತ್ತಿತತರರು ಹಾಜರಿದ್ದರು.