SUDDIKSHANA KANNADA NEWS/ DAVANAGERE/ DATE:21-11-2024
ಬೆಂಗಳೂರು: ಬಿಪಿಎಲ್ ಕಾರ್ಡ್ ಸಂಬಂಧ ಎದ್ದಿದ್ದ ವಿವಾದಕ್ಕೆ ಅಂತ್ಯ ಮಾಡುವ ಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ. ಈ ನಡುವೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರು, ಯಾವುದೇ ಕಾರಣಕ್ಕೂ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ. ಆದ್ರೆ, ಇನ್ನುಳಿದ ಯಾರೊಬ್ಬರ ಚೀಟಿ ರದ್ದು ಮಾಡುವುದಿಲ್ಲ. ಒಂದು ವೇಳೆ ರದ್ದಾಗಿದ್ದರೆ ಒಂದು ವಾರದೊಳಗೆ ವಾಪಸ್ ನೀಡಲಾಗುವುದು ಎಂದು ತಿಳಿಸಿದರು.
ಅನರ್ಹರ ಕಾರ್ಡ್ ರದ್ದಾಗುತ್ತವೆ. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯರು ಆದೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ರದ್ದುಪಡಿಸಿಲ್ಲ. ಅರ್ಹರಿಗೆ ಮತ್ತೆ ವಾಪಸ್ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 1 ಕೋಟಿ 50 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಇದ್ದು, ಒಂದು ಲಕ್ಷ 2 ಸಾವಿರದ 59 ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲಾ ಕಾರ್ಡ್ ಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಪಡಿಸಿಲ್ಲ. ತಾತ್ಕಾಲಿಕವಾಗಿ ಪರಿಶೀಲನೆಗೆ ಇಟ್ಟಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯರು ವಿವಾದ ಭುಗಿಲೇಳುತ್ತಿದ್ದಂತೆ, ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಲರ್ಟ್ ಆಗಿದ್ದರು. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಡುನಿಟ್ಡಿನ ಸೂಚನೆ ನೀಡಿದ್ದರು.
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ವರಿಕೆ ನೀಡಿದ್ದಾರೆ. ಇನ್ನು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರೂ ಸಹ ಸ್ಪಷ್ಟಪಡಿಸಿದ್ದು, ಯಾವ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.