SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ವಿಚಾರದಲ್ಲಿನ ಗೊಂದಲದ ವಿಚಾರ ಕುರಿತಂತೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನನ್ನ ಮನೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಬಂದಿದ್ದರು. ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಎಲ್ಲಾ ಮುಖಂಡರ ಜೊತೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗಾಯತ್ರಿ ಸಿದ್ದೇಶ್ವರ ಅವರು ಮನೆಗೆ ಬಂದಿದ್ದರು. ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದರು. ಫೋನ್ ಮಾಡಿಯೂ ಅವರ ಪುತ್ರ ಬೆಂಬಲಿಸುವಂತೆ ಕೋರಿದರು. ಆದ್ರೆ, ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗದು. ಈ ಕಾರಣಕ್ಕೆ ಎಲ್ಲರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ. ಗಾಯತ್ರಿ ಸಿದ್ದೇಶ್ವರ ಅವರ ಬಗ್ಗೆ ಅಪಾರ ಗೌರವ ಇದೆ. ಈ ಹಿಂದೆ ಉತ್ತಮ ಬಾಂಧವ್ಯವೂ ಇತ್ತು. ಆದ್ರೆ, ಕೆಲ ಸಮಸ್ಯೆಗಳಿಂದ ಈ ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಸರಿ ಹೋಗಬಹುದು. ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಜೊತೆಗಿರುವವರ ಜೊತೆ ಚರ್ಚಿಸಿದ ಬಳಿಕ ನಿರ್ಧಾರಕ್ಕೆ ಬರುವುದಾಗಿ ಹೇಳಿದರು.
ಮಾಧ್ಯಮಗಳ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ? ಎಲ್ಲಿ ಸಭೆ ನಡೆಸುತ್ತೇವೆ ಎಂದು ಹೇಳಲು ಆಗದು. ಅಜ್ಞಾತ ಸ್ಥಳದಲ್ಲಿ ಸಭೆ ನಡೆಸುತ್ತೇವೆ. ಎಸ್. ಎ. ರವೀಂದ್ರನಾಥ್ ಅವರು 1990ರಿಂದಲೂ ಪಕ್ಷ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ನಮ್ಮ ಗುಂಪಿನ ಎಲ್ಲರ ಜೊತೆ ಸಮಾಲೋಚನೆ ನಡೆಸಿ, ಚರ್ಚಿಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ನಿರ್ಧಾರ ತೆಗೆದು ಕೊಳ್ಳುತ್ತೇವೆ. ಇನ್ನು ಸಾಕಷ್ಟು ಸಮಯ ಇದೆ. ಈಗಲೇ ಹೇಳಲು ಆಗದು ಎಂದು ಪ್ರಶ್ನೆಯೊಂದಕ್ಕೆ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡಲ್ಲ. ನಾವೇನೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಆರೋಪ ಮಾಡಿಲ್ಲ, ಟೀಕೆ ಮಾಡಿಲ್ಲ. ತಪ್ಪೇನೂ ಮಾಡಿಲ್ಲ. ತಪ್ಪು ಮಾಡುವವರ ವಿರುದ್ಧ ಉಚ್ಚಾಟನೆಯಂಥ ಬಿಗಿ ಕ್ರಮ ತೆಗೆದುಕೊಳ್ಳಲಿ. ಆದ್ರೆ, ನಾವು ಯಾವುದೇ ರೀತಿಯ ಪಕ್ಷಕ್ಕೆ ದ್ರೋಹ ಬಗೆಯುವಂಥ ಕೆಲಸ ಮಾಡಿಲ್ಲ. ಹಾಗಾಗಿ, ನಮ್ಮನ್ನು ಯಾಕೆ ಉಚ್ಚಾಟಿಸಲಾಗುತ್ತದೆ ಎಂದು ಮಾಧ್ಯಮವದರನ್ನೇ ಪ್ರಶ್ನಿಸಿದರು.
ಸರ್ವೆ ನಡೆಸಿ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ್ದರು. ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಸರ್ವೇ ಬಂದಿಲ್ಲ. ಆದರೂ ಟಿಕೆಟ್ ನೀಡಲಾಗಿದೆ. ಹಾಗಾಗಿ, ನಾವೆಲ್ಲರೂ ಹೇಳಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರು ಹಾಗೂ ಜನರ ಅಭಿಪ್ರಾಯ. ಅದೂ ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ನಡೆಸುವುದೂ ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು.