SUDDIKSHANA KANNADA NEWS/ DAVANAGERE/ DATE:13-12-2024
ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ನೇತೃತ್ವದ ಟೀಂ ಲಗಾನ್ ಅಲ್ಲ. ರೆಡ್ ಲೈಟ್ ಬಾಯ್ಸ್ ಎಂಬ ಹೆಸರಿನಲ್ಲಿಯೇ ಇನ್ಮುಂದೆ ಈ ತಂಡವನ್ನು ಕರೆಯಲಾಗುವುದು ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಸಿದ್ದೇಶ್ವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಮನೆ ಕಳ್ಳ ನಂಬಬೇಡಿ ಎಂಬ ಮಾತಿನಂತೆ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ. ಎಂ. ಪಿ. ರೇಣುಕಾಟಾರ್ಯ, ಬೆಳ್ಳಿ ಲೇಪಿತ ಬಂಗಾರದ ಮುಖದ ಮಾಡಾಳು ಮಲ್ಲಿಕಾರ್ಜುನ್ ಬಿಜೆಪಿ ಪಕ್ಷದ ಆಂತರಿಕ ವಿಚಾರಗಳನ್ನು ವ್ಯಕ್ತಿಗತವಾಗಿ
ಉದ್ದೇಶ ಪೂರ್ವಕವಾಗಿ ಜಿ.ಎಂ. ಸಿದ್ದೇಶ್ವರರ ಕುಟುಂಬದ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶತಮಾನದ ಇತಿಹಾಸವುಳ್ಳ ವಿಶ್ವದಲ್ಲೇ ಪ್ರಸಿದ್ದಿ ಪಡೆದ ಮೈಸೂರು ಮಹಾರಾಜರು ಮಾಡಿದ್ದ ಮೈಸೂರು ಸ್ಯಾಂಡಲ್ ಹೆಸರನ್ನೇ ಹಾಳು ಮಾಡಿದ ಕುಟುಂಬವಿದು. ಇಂತ ಬ್ರಹ್ಮಾಂಡ ಭ್ರಷ್ಟಾಚಾರಿ ಕುಟುಂಬ. ಇಂದು ಸಜ್ಜನರ ಬಗ್ಗೆ ಮಾತಾಡುತ್ತಿದ್ದಾರೆ. ಬಿಜೆಪಿ ಎಂದರೆ ಶಿಸ್ತಿನ ಪಕ್ಷ. ಇಂತಹ ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಇದೀಗ ಪಕ್ಷ ಸಂಘಟನೆ ಮಾಡಿದ ಜಿ.ಎಂ. ಕುಟುಂಬದ ವಿರುದ್ಧ ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ. ಸ್ಥಳೀಯವಾಗಿ ಜನರೇ ವಿರೋಧ
ಮಾಡುತ್ತಿದ್ದೂ ಇಂದು ಸ್ವಯಂ ಘೋಷಿತ ನಾಯಕರಾಗಿದ್ದಾರೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಗೆದ್ದಾಗ ಅವರ ಮನೆಯಲ್ಲೇ ಇದ್ದು ಇಂದು ಹೊರಗಡೆ ನಿಂತು ಕಲ್ಲು ಹೊಡೆಯುತ್ತಿದ್ದಾರೆ. ಮಾಡಾಳು ಮಲ್ಲಿಕಾರ್ಜುನ್ ಹಾಗೂ ರೇಣುಕಾಚಾರ್ಯರ ರೆಡ್ ಲೈಟ್ ಟೀಮ್ ನಂತೆ ವರ್ತಿಸುತ್ತಿದ್ದಾರೆ. ಪಕ್ಷದಲ್ಲಿಯೇ ಇದ್ದುಕೊಂಡು
ಪಕ್ಷದವರ ವಿರುದ್ಧ ಮಾತನಾಡುತ್ತಿರುವುದಕ್ಕೆ ಈ ಹೆಸರು ನಾಮಕರಣ ಮಾಡಲಾಗಿದೆ. ಇತ್ತೀಚಿಗೆ ಈ ರೆಡ್ ಲೈಟ್ ಟೀಮ್ ಕೇವಲ ಸಿದ್ದಣ್ಣ ವಿರುದ್ಧ ಟಾರ್ಗೆಟ್ ಮಾಡುತ್ತಿದ್ದೂ ಈ ಬೆಳವಣಿಗೆ ಸರಿಯಲ್ಲ ಎಂದರು.
ಕೆಟ್ಟು ನಿಂತ ರೈಲ್ವೆ ಭೋಗಿಗಳಲ್ಲಿ ಕೂತು ನಾವು ವಿಮಾನದಲ್ಲಿದ್ದೀವಿ ಎಂಬ ಭಾವನೆ ಹೊಂದಿರುವ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ರೇಣುಕಾಚಾರ್ಯ ಅವರು ಜನರಿಂದ ತಿರಸ್ಕಾರವಾದ ಬಳಿಕ ಇದೀಗ ಲೋಕಸಭೆ ಸೋಲಿಗೆ ಸಿದ್ದೇಶ್ವರರೇ ಕಾರಣ ಎಂಬ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಜಿ.ಎಂ ಕುಟುಂಬವನ್ನೇ ದುರುದ್ದೇಶದಿಂದ ಟಾರ್ಗೆಟ್ ಮಾಡಿ ರಾಜಕೀಯ ಜೀವನ ಮಾಡಬೇಕೆಂದು ಕುಳಿತಿದ್ದು ಈ ಜನ್ಮದಲ್ಲೇ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇಡೀ ದೇಶವೇ ಕಾಂಗ್ರೆಸ್ ಪಕ್ಷ ತಿರಸ್ಕರಿಸಿದೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಬಿಜೆಪಿಯವರೇ ಸ್ವಪಕ್ಷವನ್ನು ಮುಗಿಸಲು ಹೊರಟಿದ್ದು ತಾವೇ ರಾಜಕೀಯದಿಂದ ಕೊನೆಯಾಗಲಿದ್ದಾರೆ. ಇದೇ ರೀತಿ ತಮ್ಮ ದ್ವೇಷ ಮುಂದುವರೆದರೆ ದಾವಣಗೆರೆ ಜಿಲ್ಲೆಯಲ್ಲಿ ರೆಡ್ ಲೈಟ್ ಬಾಯ್ಸ್ ತಂಡಕ್ಕೆ ಭವಿಷ್ಯ ಇಲ್ಲ ಎಂದರು.
ರೈತನಾಯಕ ಬಿ.ಎಸ್.ಯಡಿಯೂರಪ್ಪರವರ ಬಗ್ಗೆ ನಾಡಿನ ಜನತೆ ತುಂಬಾ ಅಭಿಮಾನವಿಟ್ಟಿದ್ದಾರೆ. ಆದರೆ ಅವರ ಮಗ ವಿಜೇಯಂದ್ರ ಮಾತ್ರ ಕಳಂಕಿತರನ್ನ ಜೊತೆಯಲ್ಲಿ ಇಟ್ಟುಕೊಂಡು ಭವಿಷ್ಯ ಕಾಣುತ್ತಿರುವುದು ದೊಡ್ಡ ವಿಪರ್ಯಾಸ ಎಂದು ಬಾಡದ ಆನಂದರಾಜ್ ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಾಗೂ ದಲಿತ ಮುಖಂಡ ದಾಗಿನಕಟ್ಟೆ ನಾಗರಾಜ್, ನಿಲೋಗಲ್ಲ ಪ್ರಸನ್ನಕುಮಾರ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಸೋಗಿ ಗುರುಶಾಂತ್ ಮತ್ತಿತರರು ಹಾಜರಿದ್ದರು.